ಕಲಬುರಗಿ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಮಾರಂಭದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಭಾಗದ ಕೆ.ಕೆ.ಆರ್.ಡಿ.ಬಿ ಮತ್ತು ಇತರೆ ಇಲಾಖೆಯ 570.05 ಕೋಟಿ ರೂ. ಮೊತ್ತದ 133 ಕಾಮಗಾರಿಗಳಿಗೆ ಅಡಿಗಲ್ಲು ಮತ್ತು 79.41 ಕೋಟಿ ರೂ. ಮೊತ್ತದ 26 ಕಾಮಗಾರಿಗಳ ಲೋಕಾರ್ಪಣೆ ಸೇರಿದಂತೆ ಒಟ್ಟಾರೆ 649.47 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದರಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಡಿಯಲ್ಲಿ 350.05 ಕೋಟಿ ರೂ. ಮೊತ್ತದ 112 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರೆ 3.35 ಕೋಟಿ ರೂ. ಮೊತ್ತದ 4 ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು. ಅದೇ ರೀತಿ ವಿವಿಧ ಇಲಾಖೆಯ 220 ಕೋಟಿ ರೂ. ಮೊತ್ತದ 21 ಕಾಮಗಾರಿಗಳಿಗೆ ಅಡಿಗಲ್ಲು ಮತ್ತು 76.06 ಕೋಟಿ ರೂ. ಮೊತ್ತದ 22 ಕಾಮಗಾರಿಗಳನ್ನು ಉದ್ಘಾಟಿಸಿ ಪ್ರದೇಶಕ್ಕೆ ಸಮರ್ಪಿಸಿದರು.
ಹಾರ್ಟ್ ಲೈನ್ ಯೋಜನೆಗೆ ಚಾಲನೆ:
ಪ್ರದೇಶದಲ್ಲಿ ಹೃದ್ರೋಗದಿಂದ ಸಾವನಪ್ಪುವರ ಸಂಖ್ಯೆ ತಗ್ಗಿಸಲು ಮತ್ತು ಗೋಲ್ಡನ್ ಹವರ್ನಲ್ಲಿ ಹೃದಯಾಘಾತಕ್ಕೊಳಗಾದವರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ 9.60 ಕೋಟಿ ರೂ.ಗಳ ಮೊತ್ತದಲ್ಲಿ “ಕೆ.ಕೆ.ಆರ್.ಡಿ.ಬಿ. ಹಾರ್ಟ್ ಲೈನ್” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ 9, ಬೀದರ-4, ಯಾದಗಿರಿ-2, ರಾಯಚೂರು-5, ಬಳ್ಳಾರಿ-4, ಕೊಪ್ಪಳ-5, ವಿಜಯನಗರ-3 ಸೇರಿದಂತೆ ಒಟ್ಟು ಅತ್ಯಾಧುನಿಕ 32 ಅಂಬುಲೆನ್ಸ್ ವಾಹನಗಳನ್ನು ಹೃದಯಾಘಾತದ ತುರ್ತು ಸಂದರ್ಭದಲ್ಲಿ ಅವಶ್ಯಕವಾಗಿರುವ ಉಪಕರಣಗಳೊಂದಿಗೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಕಾರ್ಡಿಯಕ್ ಮಾನಿಟರ್, ಡೆಫಿಬ್ರಿಲೇಟರ್, ಪೋರ್ಟೇಬಲ್ ವೆಂಟಿಲೇಟರ್, ಅಂಬು ಬ್ಯಾಗ್, ಎಮರ್ಜೆನ್ಸಿ ಡ್ರಗ್ಸ್ ಸೇವೆಗಳನ್ನು ಈ ಅಂಬುಲೆನ್ಸ್ ಹೊಂದಿವೆ.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಎಸ್.ಸುಧಾಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಕನೀಜ್ ಫಾತಿಮಾ, ಸಂಸದ ರಾಧಾಕೃಷ್ಣ ದೊಡ್ಟಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಶಾಸಕರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ವರ್ಷಾ ಜಾನೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಗ್ಯಾರಂಟಿ ಯೋಜನೆ ಅನುಷ್ಠಾನಗಳ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


