ಜಿಲ್ಲಾ ಪಂಚಾಯತ್ ಸಿ.ಇ.ಓ.ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಕಲಬುರಗಿ, ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದೊಂದಿಗೆ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ತಮಗಿದೆ ಎಂದು ನಿರ್ಗಮಿತ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿಕ್ಕಮಂಗಳೂರು ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಕಚೇರಿ ಸಿಬ್ಬಂದಿಯಿಂದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ಮೂರು ವರ್ಷಗಳ ಕಾಲ ಸುಧೀರ್ಘವಾಗಿ ಗ್ರಾಮೀಣ ಜನರ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು ಎಂದರು.
ಕಲಬುರಗಿ ದೊಡ್ಡ ಜಿಲ್ಲೆ. ಇಲ್ಲಿ ಕಾರ್ಯನಿರ್ವಹಿಸಿದರೆ ಬೇರೆಡೆ ಸರಳವಾಗಿ ಕಾರ್ಯನಿರ್ವಹಿಸಬಹುದೆಂಬ ಮಾತಿದೆ. ಅಂತಹ ಒಂದು ಅತ್ಮವಿಶ್ವಾಸ ಇಲ್ಲಿ ನಮಗೆ ಸಿಕ್ಕಿದ್ದು, ಮುಂದಿನ ಸವೆಗೆ ನೆರವಾಗಲಿದೆ. ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸುತ್ತಾ ಪ್ರತಿಯೊಂದು ಕಾರ್ಯಕ್ರಮ, ಯೋಜನೆ ತುಂಬಾ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಇದು ತಮಗೆ ಸಂತಸ ತಂದಿದೆ. ಇದೇ ರೀತಿಯ ಸಾಂಘಿಕ ಯತ್ನ ಮುಂದೆಯೂ ನಡೆಯಬೇಕು. ನೂತನ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೂ ಸಹ ಅಧಿಕಾರಿಗಳು ಇದೇ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಭಂವರ್ ಸಿಂಗ್ ಮೀನಾ ಅವರು, ಪಂಚಾಯತಿಯ ಎಲ್ಲ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿದ್ರೆ ಅರ್ಧ ಕೆಲಸ ಆದಂತೆ ಎಂಬುದನ್ನು ಮರೆಯದಿರಿ ಎಂದರು.
ಜಿಲ್ಲೆಯಲ್ಲಿ ಆರ್.ಡಿ.ಪಿ.ಅರ್ ಇಲಾಖೆ ಮೂಲಕ ಸಾಕಷ್ಟು ಜನಪರ ಯೋಜನೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ಮಾಡಿರುವೆ. ಕೆಲವೊಮ್ಮೆ ಕೆಲಸದ ವಿಷಯದಲ್ಲಿ ಕಠಿಣ ನಿರ್ಧಾರ ಸಹ ತೆಗೆದುಕೊಳ್ಳಬೇಕಾಗುತ್ತದೆ. ಉತ್ತಮ ಕಾರ್ಯನಿರ್ವಹಿಸದ ಕೆಲ ಪಿ.ಡಿ.ಓ ಗಳ ವಾರ್ಷಿಕ ವೇತನ ಬಡ್ತಿ ತಡೆ ಹಿಡಿದಿದ್ದೆ. ತದನಂತರ ಅವರುಗಳು ತಮ್ಮ ಕೆಲಸದಲ್ಲಿ ಸುಧಾರಣೆ ಕಂಡುಕೊಂಡಿದ್ದರಿಂದ ವರ್ಗಾವಣೆ ಮುಂಚೆ ಅವರ ವೇತನ ಬಡ್ತಿ ಕಡತಕ್ಕೆ ಸಹಿ ಹಾಕಿರುವೆ ಎಂದು ಪಿ.ಡಿ.ಓ ಗಳಿಗೆ ಸಂತಸದ ಸುದ್ದಿ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿ ಅಧಿಕಾರ ವಹಿಸಿಕೊಂಡಿರುವ ರಾಹುಲ ಸಂಕನೂರ್ ಅವರಿಗೂ ಜಿಲ್ಲಾ ಪಂಚಾಯತ್ ಕಚೇರಿ ಸಿಬ್ಬಂದಿಗಳು ಹೂಗುಚ್ಛ ನೀಡಿ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿ-ಸಿಬ್ಬಂದಿಗಳು, ಇತರೆ ಇಲಾಖೆಯ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
*ಯಾರು ಏನಂದ್ರು?:*
ಈ ಮಣ್ಣಿನ ವಿಶೇಷ ಅಂದ್ರೆ ಈ ಜಿಲ್ಲೆಗೆ ಬಂದ ಅಧಿಕಾರಿಗಳಿಗೆ ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶಗಳನ್ನ ಕೊಡುತ್ತೆ. ಯಾರು ಅಂತಹ ಅವಕಾಶಗಳನ್ನ ಬಳಸಿಕೊಂಡು ಕೆಲಸ ಮಾಡ್ತಾರೋ ಅವ್ರು ಜನರ ನೆನಪಲ್ಲಿ ಉಳಿಯುತ್ತಾರೆ. ಅಂತಹ ಅಧಿಕಾರಿಗಳ ಪೈಕಿ ಭಂವರ್ ಸಿಂಗ್ ಮೀನಾರವರು ಅಂದ್ರೆ ತಪ್ಪಾಗಲಿಕ್ಕಿಲ್ಲ
*-ಡಾ.ಶರಣಪ್ಪ,ಆಯುಕ್ತರು,ಕಲಬುರಗಿ ನಗರ ಪೋಲೀಸ್*
ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ಎಲ್ಲಾ ಇಲಾಖೆಯ ಕೆಲಸಗಳನ್ನು ಕಠಿಣ ಪರಿಶ್ರಮ ಹಾಗೂ ಶೃದ್ಧೆಯಿಂದ ಮಾಡಿದ್ದಾರೆ. ಹೀಗಾಗಿ ಭಂವರ್ ಸಿಂಗ್ ಮೀನಾರವರು ಜನಮೆಚ್ಚುಗೆಯನ್ನ ಪಡೆದಿದ್ದಾರೆ. ನನಗೆ ವೈಯಕ್ತಿಕವಾಗಿ ಸಹ ತುಂಬಾ ಆತ್ಮೀಯರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಹೋಗ್ತಿದ್ದಾರೆ. ಹೀಗೆ ಅವರ ಜನಪರ ಸೇವೆ ಮುಂದುವರೆಯಲಿ ಎಂದು ಹಾರೈಸುವೆ
*-ಇಕ್ರಮ್ ಶರೀಫ್,ಜಿಲ್ಲಾಧಿಕಾರಿಗಳು ಕಲಬುರಗಿ*
ನನಗೆ ಈ ಮೂರು ವರ್ಷ ಹೇಗೆ ಸಹಕಾರ ಕೊಟ್ಟಿದ್ದಿರೋ ಹೊಸ ಸಿಇಓ ರವರಿಗೂ ಅದೇ ರೀತಿಯ ಸಹಕಾರ ಕೊಡಿ ಅಂತ ಪಂಚಾಯತಿಯ ಎಲ್ಲ ಅಧಿಕಾರಿಗಳಿಗೂ ಮನವಿ ಮಾಡ್ತೇನೆ. ಜನರ ಸಮಸ್ಯೆ ಆಲಿಸಿದ್ರೆ ಅರ್ಧ ಕೆಲಸ ಆದಂತೆ. ಜಿಲ್ಲೆಯಲ್ಲಿ ಒಂದು ಟೀಂ ತರ ನಾವು ಕೆಲಸ ಮಾಡುವ ಅವಶ್ಯಕತೆ ಇದೆ
*-ಭಂವರ್ ಸಿಂಗ್ ಮೀನಾ,ಡಿ.ಸಿ ಚಿಕ್ಕಮಗಳೂರು*
( ನಿರ್ಗಮಿತ ಸಿಇಓ,ಜಿಲ್ಲಾ ಪಂಚಾಯತ್ ಕಲಬುರಗಿ)


