ಯಾದಗಿರಿ, ಸಹಜ ಸಮೃದ್ಧ, ಮತ್ತು ಎಲ್ಡಿಸಿ (LDC) ಇವರ ಸಂಯುಕ್ತ ಆಶ್ರಯದಲ್ಲಿ, ಯಾದಗಿರಿ ತಾಲ್ಲೂಕಿನ ಸೈದಾಪುರ ಹೋಬಳಿಯ ಸಂಗವಾರ ಗ್ರಾಮದಲ್ಲಿ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕ ನಿರ್ವಹಣೆ ಕುರಿತು “ಜಾಗೃತಿ” ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಸುಸ್ಥಿರ ಮತ್ತು ನೈಸರ್ಗಿಕ ವಿಧಾನಗಳ ಮೂಲಕ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವ ಅರಿವಿನ ಕಾರ್ಯಕ್ರಮದ ಭಾಗವಾಗಿ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್ಡಿಸಿ ಸಂಸ್ಥೆಯ ಸಂಶೋಧನಾ ಎನಾಲಿಸ್ಟ್ ಗಿರೀಶ್ ಮಾತನಾಡಿ ” ಎಲ್. ಡಿ. ಸಿ ಸಂಸ್ಥೆ ಹತ್ತಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಲು ರೈತರಿಗೆ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಿ, ಗುಲಾಬಿ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕೆ ಮೋಹಕ ಬಲೆಗಳನ್ನು ವಿತರಿಸುತ್ತಿದೆ. ಒಂದು ಎಕರೆಗೆ ನಾಲ್ಕು ಮೋಹಕ ಬಲೆಗಳನ್ನು ಅಳವಡಿಸಿದರೆ ಕೀಟ ಹತೋಟಿ ಸಾಧ್ಯವಾಗುತ್ತದೆ. ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ಬಲೆಗಳನ್ನು ಅಳವಡಿಸಿ, ನಿಯಮಿತವಾಗಿ ಸ್ವಚ್ಛಗೊಳಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ರವರು ಮಾತನಾಡಿ ” ಹತ್ತಿ ಬೆಳೆಗೆ ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕೀಟನಾಶಕ ಮತ್ತು ಕಳೆನಾಶಕಗಳ ಬಳಕೆ ಮಾಡುತ್ತಿದ್ದು, ಇದರಿಂದ ರೈತರ ಹಣ ಮತ್ತು ಶ್ರಮ ಪೋಲಾಗುತ್ತಿದೆ. ಮೋಹಕ ಬಲೆ ಮತ್ತು ಇತರೆ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕೀಟನಾಶಕಗಳ ಅನಗತ್ಯ ಬಳಕೆ ತಗ್ಗಿಸಬಹುದು. ‘ ಎಂದು ಅಭಿಪ್ರಾಯಪಟ್ಟರು.
ಬೇಯರ್ ಕ್ರಾಪ್ ಸೈನ್ಸ್ನ ಮುಖ್ಯಸ್ಥ ಶಂಭಣ್ಣ ಹಾದಿಮನಿ ಅವರು ಮಾತನಾಡಿ ” ಬಿಟಿ ಹತ್ತಿಯ ಜೊತೆಗೆ ಬರುವ ನಾನ್ ಬಿಟಿ ಹತ್ತಿಯನ್ನು ( ರೆಪ್ಯೂಜಿ ಬೆಳೆ) ಹೊಲದ ಸುತ್ತ ಸಣ್ಣ ಪ್ರಮಾಣದಲ್ಲಿ ಬೆಳೆಯುವುದರಿಂದ ಕೀಟಗಳು ಅವುಗಳತ್ತ ಆಕರ್ಷಕವಾಗುತ್ತವೆ. ಇದರಿಂದ ಮುಖ್ಯ ಬೆಳೆಗೆ ಬರುವ ಗುಲಾಬಿ ಕಾಯಿ ಕೊರಕ, ದ್ವಾಮೆ ಮೊದಲಾದ ಕೀಟಗಳ ಕಾಟ ತಪ್ಪುತ್ತದೆ. ರೈತರು ಅತಿಯಾಗಿ ರಾಸಾಯನಿಕ ಕ್ರಿಮಿನಾಶಕಗಳ ಮೇಲೆ ಅವಲಂಬಿಸದೆ, ಬೇವಿನ ಎಣ್ಣೆ ಹಾಗೂ ಮೋಹಕ ಬಲೆಗಳನ್ನು ಬಳಸುವುದರಿಂದ ಕೀಟ ನಿಯಂತ್ರಣ ಸಾಧ್ಯ. ಇದರಿಂದ ಕೃಷಿ ಖರ್ಚು ಕೂಡ ಕಡಿಮೆಯಾಗುತ್ತದೆ ” ಎಂದು ಅಭಿಪ್ರಾಯಪಟ್ಟರು.
ಸುಮಿಟೋಮೋ ಕಂಪನಿಯ ಈರಣ್ಣಗೌಡ ಮಾತನಾಡಿ ” ” ಅನಗತ್ಯವಾಗಿ ಕೀಟನಾಶಕಗಳನ್ನು ಬಳಸುವುದರಿಂದ ಕೀಟಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿವೆ. ಮೋಹಕ ಬಲೆ ಮತ್ತು ಅಂಟು ಬಲೆಗಳ ಬಳಕೆ ಮಾಡುವುದರಿಂದ ಕೀಟಗಳ ಹಾವಳಿಯನ್ನು ಗಣನೀಯವಾಗಿ ತಗ್ಗಿಸಬಹುದು. ಸಾವಯವ ಕೀಟನಾಶಕಗಳ ಬಳಕೆಗೆ ಉತ್ತೇಜನ ನೀಡಬೇಕು” ಎಂದರು.
ಎಲ್ಡಿಸಿ ಸಂಸ್ಥೆಯ ಸುಸ್ಥಿರ ಕೃಷಿ ಮುಖ್ಯಸ್ಥ ಅರುಣ್ ಕುಮಾರ್ ಮಾತನಾಡಿ “ಗ್ರಾಮದ ಎಲ್ಲರೂ ಹತ್ತಿಯನ್ನು ಏಕಕಾಲಕ್ಕೆ ಬಿತ್ತನೆ ಮಾಡಬೇಕು. ಡಿಸೆಂಬರ್ ಕೊನೆಯ ಒಳಗೆ ಹತ್ತಿ ಬಿಡಿಸಿ , ಹೊಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹತ್ತಿ ಕಡ್ಡಿಗಳನ್ನು ಸುಡದೆ, ಕತ್ತರಿಸಿ ನೆಲಕ್ಕೆ ಸೇರಿಸಬೇಕು ” ಎಂದು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಜ ಸಮದ್ಧ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿ ” ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ದೇಸಿ ಹತ್ತಿ ತಳಿಗಳು ಕೀಟ ಮತ್ತು ರೋಗ ನಿರೋಧಕ ಗುಣ ಹೊಂದಿದ್ದವು. ಹತ್ತಿಯ ಜೊತೆಗೆ ಮೆಣಸಿನಕಾಯಿ, ಈರುಳ್ಳಿ, ತೊಗರಿ ಮೊದಲಾದ ಉಪ ಬೆಳೆಗಳು ರೈತರಿಗೆ ಆದಾಯ ಮತ್ತು ನೆಲದ ಫಲವತ್ತತೆಯನ್ನು ಹೆಚ್ಚಿಸಲು ಅನುಕೂಲ ಮಾಡುತ್ತಿದ್ದವು. ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಖರ್ಚನ್ನು ತಗ್ಗಿಸಬಹುದು. ಸಣ್ಣ ಪ್ರಮಾಣದಲ್ಲಾದರೂ ದೇಸಿ ಹತ್ತಿಯನ್ನು ಬೆಳೆಯಲು ಮುಂದಾಗಬೇಕು ” ಎಂದು ತಿಳಿಸಿದರು.
ಹತ್ತಿ ಬೆಳೆಯಲ್ಲಿ ಮೋಹಕ ಬಲೆಗಳನ್ನು ಹೇಗೆ ಅಳವಡಿಸಬೇಕೆಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತರಿಗೆ 10 ಮೋಹಕ ಬಲೆಗಳ ಕಿಟ್ ಉಚಿತವಾಗಿ ವಿತರಿಸಲಾಯಿತು.
ಸಹಜ ಸಮೃದ್ಧ ಸಂಸ್ಥೆಯ ಶ್ರೀದೇವಿ ಸಿದ್ಧರಾಮಪ್ಪ, ಅಜರುದ್ದೀನ್, ಗ್ರಾಮದ ಹಿರಿಯರಾದ ತಿಪ್ಪರಾಯ ಸ್ವಾಮಿ, ಸಾಬರೆಡ್ಡಿ , ಮತ್ತು ಸಿದ್ಧರಾಯ್ಯ ಉಪಸ್ಥಿತರಿದ್ದರು.


