ಕಲಬುರ್ಗಿ : ರಾಜ್ಯದಲ್ಲಿ ನೇಮಕಾತಿ ಪ್ರಾಧಿಕಾರಗಳು ವಿಭಿನ್ನ ನಿಯಮಗಳ ಮುಖಾಂತರ ನೇಮಕಾತಿ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಭಾಗದ 371 ಜೇ ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಬಡ್ತಿ ಯಲ್ಲಿ ಭಾರಿ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಇಂದು ಸದನದಲ್ಲಿ ಪ್ರಸ್ತಾಪಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಂವಿಧಾನ ವಿಶೇಷ ವಿಧಿ 371 ಜೇ ಬಂದನಂತರ ಈ ಭಾಗದ ನೇಮಕಾತಿ ಹಾಗೂ ಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ 2016 ರಿಂದ 2025 ರ ವರೆಗೆ ಅನೇಕ ಸುತ್ತೋಲೆಗಳನ್ನು ಸರ್ಕಾರ ಹೊರಡಿಸಿದೆ. ಈ ಎಲ್ಲ ಸುತ್ತೋಲೆ ಗಳಿಂದ ಗೊಂದಲವುಂಟಾಗಿ ಬೇರೆ ಬೇರೆ ನೇಮಕಾತಿ ಪ್ರಾಧಿಕಾರಗಳು ವಿಭಿನ್ನ ರೀತಿಯಲ್ಲಿ ನೇಮಕಾತಿ ಮಾಡಿಕೊಂಡಿದ್ದರಿಂದ ನಮ್ಮ ಭಾಗದ ಯುವಕರಿಗೆ ಭಾರಿ ಅನ್ಯಾಯವಾಗುತ್ತಿದೆ ಆದ್ದರಿಂದ ಈ ಅನ್ಯಾಯವನ್ನು ತಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಇತ್ತಿಚೆಗೆ 03-06-2025 ರಂದು ಮತ್ತೊಂದು ಆದೇಶ ಹೊರಡಿಸಿದ್ದು ಈ ಆದೇಶವು ಸಹ ಬಹಳಷ್ಟು ಗೊಂದಲ ಹೊಂದಿದೆ, ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು, ನೇಮಕಾತಿ ಹಾಗೂ ಬಡ್ತಿ ಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹಾರ ನೀಡಲು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು ಅವರು ಅದೇ ಭಾಗದವರಾಗಿರುವರಿಂದ ಅವರು ಸರಿ ಮಾಡುವ ವಿಶ್ವಾಸವಿದೆ ಅವರು ಈಗ ವಿದೇಶದಲ್ಲಿದ್ದು ಅವರು ಬಂದ ನಂತರ ಆ ಆದೇಶದ ಬಗ್ಗೆ ಗೊಂದಲವಿದ್ದರೆ ಅದನ್ನು ಸರಿಪಡಿಸುವ ಕೆಲಸ ಖಂಡಿತ ಮಾಡುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕಾನೂನು ನೀಡಿದ್ದು ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ನೇಮಕಾತಿ ಹಾಗೂ ಬಡ್ತಿ ಎಂದು ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು


