ಕಲಬುರ್ಗಿ : 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ವಿಧಾನ ಪರಿಷತ್ ನಲ್ಲಿ ಗಮನ ಸೆಳೆಯುವ ಮೂಲಕ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಅನುದಾನ ನೀಡುವ ಭರವಸೆ ಪಡೆಯುವಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯಶಸ್ವಿಯಾದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮೊದಲಿಗೆ ಅವರು 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ವಿಧಾನ ಪರಿಷತ್ ನಲ್ಲಿ ವಿಚಾರ ಪ್ರಸ್ತಾಪಿಸಿದಾಗ, ಸರ್ಕಾರ ನೀಡಿದ ಉತ್ತರಕ್ಕೆ ತೃಪ್ತರಾಗಲಿಲ್ಲ ಆದರೆ ಸಚಿವರಾದ ಮಧು ಬಂಗಾರಪ್ಪ ನವರು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿಯವರಿಗೆ ನಮ್ಮ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಹಿತ ಕಾಪಾಡಲು ಬದ್ಧವಾಗಿದ್ದು 1995 ರಿಂದ 2005 ರ ವರೆಗಿನ ಅಂದರೆ 10 ವರ್ಷಗಳ ವರೆಗಿನ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲು ಕುರಿತು ಕೂಡಲೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಹಣಕಾಸು ಇಲಾಖೆ ಅಧಿಕಾರಿಗಳ ಜೋತೆ ಮಾತನಾಡಿ ಅತಿ ಶೀಘ್ರದಲ್ಲೇ ಧನಾತ್ಮಕ ತೀರ್ಮಾನ ತೆಗೆದುಕೊಳ್ಳಲು ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಮೋಶಿಯವರು ಕೇವಲ ಮೌಖಿಕವಾಗಿ ಭರವಸೆ ನೀಡುವುದಕ್ಕಿಂತ, ಇದಕ್ಕೊಂದು ಲಿಖಿತ ಆದೇಶ ಹೊರಡಿಸಲು ಆಗ್ರಹಿಸಿದರು.


