ಸಂವಿಧಾನದಿಂದಲೆ ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ -ಅಲ್ಲಮಪ್ರಭು ಪಾಟೀಲ

ಅರ್ಥಪೂರ್ಣ ಸಂವಿಧಾನ ದಿನಾಚರಣೆ:

ಕಲಬುರಗಿ,  ಸ್ವಾತಂತ್ರ ಪೂರ್ವ ಮುನುಷ್ಯರನ್ನು ಮನುಷ್ಯರ ರೀತಿಯಲ್ಲಿ ಕಾಣದ ಮತಾಂಧತೆ, ಜಾತಿಯತೆ, ಮೂಢನಂಬಿಕೆ, ಅಸ್ಪೃಶ್ಯತೆ ದೇಶದಲ್ಲಿ ತಾಂಡವಾಡುತ್ತಿತ್ತು. ಇಂತಹ ಎಲ್ಲಾ ಕಷ್ಟಗಳನ್ನು ಅನುಭವಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನ ಜಾರಿಯಾದ ಪರಿಣಾಮ ಇಂದು ದೇಶದಲ್ಲಿ ಜಾತಿ, ಧರ್ಮ, ವರ್ಣವಿಲ್ಲದೆ ಸರ್ವರು ಸಮಾನೆತಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಮಡಿತ ರಂಗಮಂದಿರದಲ್ಲಿ ಆಯೋಜಿಸಿದ “ಸಂವಿಧಾನ ದಿನಾಚರಣೆ-2025” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವ ಅಮೆರಿಕಾದಿಂದ ಬಂದ ಅಕ್ಕಿ ತಿನ್ನಬೇಕಿತ್ತು. ಸ್ವಾತಂತ್ರ‍್ಯ ಬಂದ ನಂತರ ದೇಶದ ಸಮಗ್ರ ಅಭಿವೃದ್ಧಿಗೆ ಮತ್ತು ಸರ್ವರ ಏಳಿಗೆಗೆ ಅಂಬೇಡರ್ ಅವರು ಸಂವಿಧಾನ ಎಂಬ ಮಹಾಗ್ರಂಥ ನೀಡಿದ ಫಲವಾಗಿ ಇಂದು ವಿಶ್ವಕ್ಕೆ ಆಹಾರ ಧಾನ್ಯ ನೀಡುವ ಸಾಮರ್ಥ್ಯ ನಮಗಿದೆ. ಬರಿ ಇಷ್ಟೆ ಅಲ್ಲ ವಿಶ್ವಕ್ಕೆ ಡಾಕ್ಟರ್, ಇಂಜಿನೀಯರ್ ಗಳನ್ನು ನಾವು ಪೂರೈಸುತ್ತಿದೇವೆ. ಅಷ್ಟರ ಮಟ್ಟಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಲಬುರಗಿಯಲ್ಲಿ ಪದವಿ ಕಾಲೇಜು ಇರಲಿಲ್ಲ, ಉನ್ನತ ಶಿಕ್ಷಣಕ್ಕೆ ಹೈದ್ರಾಬಾದ್‌ಗೆ ಹೋಗಬೇಕಿತ್ತು. ಇಂದು ಇಲ್ಲಿಯೇ 4-5 ವಿಶ್ವವಿದ್ಯಾಲಯಗಳಿವೆ. ಇಂತಹ ಕ್ರಾಂತಿಕಾರಿ ಬದಲಾವಣೆಯ ಹಿಂದೆ ಸಂವಿಧಾನ ಮತ್ತು ಅದರ ಮೂಲಾಶಯ ಅಡಗಿದೆ ಎಂಬುದನ್ನು ಯಾರು ಮರೆಯಬಾರದು ಎಂದರು.

ಹನ್ನೆರಡನೇ ಶತಮಾನದಲ್ಲಿಯೂ ಜಾತಿ ಪದ್ಧತಿ ಹೋಗಲಾಡಿಸುವಲ್ಲಿ ಶರಣರು ಶ್ರಮಿಸಿದ್ದಾದರು ಅದು ಜಾರಿಗೆ ಬರಲಿಲ್ಲ. ಬುದ್ಧ, ಬಸವನ ಆಶಯಗಳನ್ನೆ ನಮ್ಮ ಸಂವಿಧಾನ ಹೊಂದಿದೆ. 33 ಕೋಟಿದಿಂದ 147 ಕೋಟಿ ದೇಶದ ಜನಸಂಖ್ಯೆ ಹೆಚ್ಚಿದ್ದರೂ ದೇಶವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವಂತಹ ಶಕ್ತಿ ನಮ್ಮ ಸಂವಿಧಾನಕ್ಕಿದೆ. ಇಂತಹ ಪ್ರಜಾಪ್ರಭುತ್ವ ಸ್ನೇಹಿ ಸಂವಿಧಾನ ಇಂದು ಇಡೀ ವಿಶ್ವವೇ ಮೆಚ್ಚುತ್ತಿದೆ ಎಂದು ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.

ಸಂವಿಧಾನ ಮರೆತರೆ ಭಾರತಕ್ಕೆ ಭವಿಷ್ಯವಿಲ್ಲ:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಅವರು ತಮ್ಮ ಉಪನ್ಯಾಸದಲ್ಲಿ ಮಾತನಾಡುತ್ತಾ, ಸಂವಿಧಾನ ಜಾರಿಗೆ ಬಂದು 75 ವರ್ಷ ಗತಿಸಿದರೂ ಇನ್ನು ಕೆಲವರು ಅದು ಒಂದು ವರ್ಗಕ್ಕೆ ಸೀಮಿತ, ಅಂಬೇಡ್ಕರ್ ಅವರೊಬ್ಬರೆ ಬರೆಯಲಿಲ್ಲ ಎಂಬಿತ್ಯಾದಿಯಾಗಿ ಶ್ರೇಷ್ಠ ಗ್ರಂಥವನ್ನು ಅನುಮಾನ ಮತ್ತು ಕೀಳರಿಮೆ ಮನೋಭಾವದಿಂದ ನೋಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. ಸರ್ವರ ಲೇಸನ್ನೆ ಬಯಸುವ ಸಂವಿಧಾನದ ಸಾಕ್ಷರತೆ ಕೊರತೆ ಇದೆ. ಪ್ರತಿಯೊಬ್ಬರು ಸಂವಿಧಾನ ಓದಬೇಕು ಮತ್ತು ಅದೆರ ಮೂಲ ಆಶಯ ಅರಿಯಬೇಕು. ಸಂವಿಧಾನ ಮರೆತರೆ ಭಾರತಕ್ಕೆ ಭವಿಷ್ಯವಿಲ್ಲ ಎಂದರು.

ಭಾರತದ ಸಂವಿಧಾನವನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಎರಡು ರೂಪದಲ್ಲಿ ಗ್ರಹಿಸಿದಾಗ ಇದರ ಮಹತ್ವ ಮತ್ತು ಪ್ರಾಮುಖ್ಯತೆ ನಮ್ಮ ಅರಿವಿಗೆ ಬರುತ್ತೆ. ಸ್ವಾತಂತ್ರ್ಯ ಪೂರ್ವ ಶಿಕ್ಷಣ, ಉದ್ಯೋಗ ಉಳ್ಳವರ ಪಾಲಾಗಿತ್ತು. ಮಹಿಳೆಯರನ್ನು ಕೆಟ್ಟದಾಗಿ ಕಾಣಲಾಗುತ್ತಿತ್ತು. ಬಾಲ್ಯ ವಿವಾಹ, ಜಾತಿ ವ್ಯವಸ್ಥೆ ಪದ್ದತಿ ಜಾರಿಯಲ್ಲಿತ್ತು. ಸ್ವಾತಂತ್ರ್ಯದ ನಂತರ ಸರ್ವರು ಗೌರವಯುತವಾಗಿ ಬದುಕು ಸಾಗಿಸುವಂತಾಗಿದೆ. ಶಿಕ್ಷಣ, ಆಹಾರ ಹಕ್ಕಾಗಿ ಪರಗಣಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಪ್ರತಿ ವ್ಯಕ್ತಿಗೆ ಒಂದು ವೋಟಿನ ರಾಜಕೀಯ ಮೌಲ್ಯ ಸಿಕ್ಕಿದೆ. ಇದು ಸಂವಿಧಾನದ ಫಲ ಎಂದರು.

ಸಂವಿಧಾನ ಜಾಥಾಕ್ಕೆ ಚಾಲನೆ,ಸಂವಿಧಾನ ಶಿಲ್ಪಿಗೆ ಗಣ್ಯರಿಂಗ ಗೌರವ ನಮನ:

ಇದಕ್ಕು ಮುನ್ನ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥವು ಜಗತ್ ವೃತ್ತ ಮಾರ್ಗವಾಗಿ ರಂಗಮಂದಿರ ವರೆಗೆ ಬಂದು ಸಂಪನ್ನಗೊಂಡಿತ್ತು. ಇನ್ನು ಜಗತ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಆದಿಯಾಗಿ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ, ಕರ್ನಾಟಕ ರಾಜ್ಯ ಎಸ್.ಸಿ-ಎಸ್.ಟಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬ್ಳಿ ಸೇರಿದಂತೆ ಇತರೆ ಅಧಿಕಾರಿಗಳು, ಗಣ್ಯರು, ಶಾಲಾ-ಕಾಲೇಜು ಹಾಗೂ ವಸತಿ ನಿಲಯದ ಮಕ್ಕಳು ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ರಾಜಶೇಖರ್ ಮಾಂಗ್ ನಿರೂಪಿಸಿದರು. ಸಂತೋಷ ಕುಮಾರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವರ್ಷಾ, ನಾಗೇಶ ಎಂಬ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಬೋಧಿಸಿದರು.

Leave a Reply

Your email address will not be published. Required fields are marked *

error: Content is protected !!