ಸೇಡಂ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ- ಡಾ. ಶರಣಪ್ರಕಾಶ ಪಾಟೀಲ್‌

ಖಾಚೂರ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ

ಕಲಬುರಗಿ : ಸೇಡಂ ಪಟ್ಟಣಕ್ಕೆ ಖಾಚೂರು ಬಾಂದಾರು ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲಿಡಲಾಗಿದೆ. ಇದರಿಂದ ಬರುವ ದಿನಗಳಲ್ಲಿ ಪಟ್ಟಣದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಹೇಳಿದ್ದಾರೆ.

ಮಂಗಳವಾರ ಸೇಡಂ ಪಟ್ಟಣದ ಸರ್ವೇ ನಂ. 705ರ ಆಶ್ರಯ ಕಾಲೋನಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಸೇಡಂ ಪುರಸಭೆ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಸೇಡಂ ಪಟ್ಟಣಕ್ಕೆ ಖಾಚೂರ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ (ಅಂದಾಜು ಮೊತ್ತ ರೂ. 47.85 ಕೋಟಿಗಳು) ಶಂಕುಸ್ಥಾಪನೆಯನ್ನು ಪೂಜೆ ಮಾಡುವ ಮೂಲಕ ನೆರವೇಸಿಸಿ ಮಾತನಾಡಿದರು.

ಸೇಡಂ ಪಟ್ಟಣಕ್ಕೆ ಈಗ ಸಟಪಟನಹಳ್ಳಿ ಬಾಂದಾರಿನ ನೀರು ಪೂರೈಕೆ ಇದ್ದರೂ ಅಲ್ಲಲ್ಲಿ ಸಮಸ್ಯೆಯಾಗುತ್ತಿರೋದು 2004 ರಲ್ಲೇ ಮೊದಲಿಗೆ ಶಾಸಕನಾದಾಗ ಗಮನಕ್ಕೆ ಬಂತು. ಇದೀಗ ಅವೆಲ್ಲಾ ಸಮಸ್ಯೆಗೆ ಕಾಯಂ ಪರಿಹಾರವಾಗಿ ಈ ಯೋಜನೆ ರೂಪಿಸಲಾಗಿದೆ. ಇದರಿಂದ ಸೇಡಂನಲ್ಲಿ ಇನ್ನು ಒಂದೂವರೆ ವರ್ಷದ ನಂತರ ಪ್ರತಿಯೊಬ್ಬರಿಗೂ 135 ಲೀಟರ್‌ ಶುದ್ಧ ನೀರು ಲಭ್ಯವಾಗಲಿದೆ ಎಂದರು.

ಆಶ್ರಯ ಕಾಲೋನಿ, ಚಿಂಚೋಳಿ ರಸ್ತೆ, ಕಲಬುರಗಿ ರಸ್ತೆ ಸೇರಿದಂತೆ ಸೇಡಂನಲ್ಲಿ 5 ಕಡೆ ಹೊಸ ಮೇಲ್‌ಸ್ತರದ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ನೀರು ಸಂಗ್ರಹಿಸಿ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಸದರಿ ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರು, ಅಧಿಕಾರಿಗಳಿಗೆ ಅವರು ಖಡಕ್‌ ಸೂಚನೆ ನೀಡಿದರು.

ಸೇಡಂ ತಾಲೂಕು ಆಸ್ಪತ್ರೆ ಹಾಸಿಗೆ ಸಂಖ್ಯೆ 150 ಕ್ಕೆ ಹೆಚ್ಚಿಸಲಾಗಿದೆ , ಪುರಸಭೆ ನಗರ ಸಭೆ ಸಾಗಿಸುವ ಕೆಲಸ ಸಾಗಿದೆ. 500 ಕೋಟಿ ರೂ ನಲ್ಲಿ ಕಲ್ಯಾಣ ಪಥ, ಪ್ರಗತಿ ಪಥ ಸೇರಿದಂತೆ ಹಲವು ಯೋಜನೆಗಳಲ್ಲಿ ಸೇಡಂ ಸಂಪರ್ಕ ರಸ್ತೆ ಮರು ನಿರ್ಮಾಣ ಸಾಗಿದೆ. ಇದಲ್ಲದೆ ತಾಲೂಕು ಆಸ್ಪತ್ರೆಗೆ 5 ಕೋಟಿ ರು ಹೆಚ್ಚಿನ ಅನುದಾನ ತರಲಾಗಿದೆ. ಸೇಡಂ ಸೇರಿದಂತೆ ಕಲಬುರಗಿಯಲ್ಲಿ ಹೆಲ್ತ್‌ ಹಬ್‌ ನಿರ್ಮಾಣ ತಮ್ಮ ಗುರಿ ಎಂದರು.

ಜಯದೇವ, ಕಿದ್ವಾಯಿ, ಸೂಪರ್‌ ಸ್ಪೇಶ್ಯಾಲಿಟಿ, ಟ್ರಾಮಾ ಕೇರ್‌ ಆಸ್ಪತ್ರೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ಸಮಾಧಾನ ಹೊರಹಾಕಿದ ಸಚಿವರು ಬಡವರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡದೆ ಸರಕಾರಿ ಸಂಸ್ಥೆಗಳಿಗೆ ಬಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಸೇಡಂ ಪಟ್ಟಣದಲ್ಲಿ ಒಳ ಚರಂಡಿ ಜಾಲ ಬಲವರ್ಧನೆಗೂ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಇನ್ನು 800 ಮೀಟರ್‌ ಕಾಮಗಾರಿ ಬಾಕಿ ಇದೆ. ಇದು ಜೋಡಣೆಯಾದಲ್ಲಿ ಒಳ ಚರಂಡಿ ಸಮಸ್ಯೆಯೂ ಬಗೆಹರಿಯಲಿದೆ. ₹56 ಕೋಟಿ ಯೋಜನೆ ಇದಾಗಿದ್ದು, ಈಗಾಗಲೇ ಎಸ್‌ಟಿಪಿ ಕೂಡ ಆಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಹೇಳಿದರು.

ಇಇ ನರಸಿಂಹ ರೆಡ್ಡಿ, ಸಂಜೀವ ಕುಮಾರ್‌ , ಎಸಿ ಪ್ರಭು ರೆಡ್ಡಿ, ತಹಶೀಲ್ದಾರ್‌ ಶ್ರೇಯಾಂಕ್‌ ಧನಶ್ರಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದನೂರ್‌, ಉಪಾಧ್ಯಕ್ಷೆ ಸೈಜಾದಬಿ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!