ಕಾಡಂಗೇರಾ (ಬಿ): ಕರವೇ ವತಿಯಿಂದ ಗ್ರಾಮೀಣ ವಾಲಿಬಾಲ್ ಕ್ರೀಡಾಕೂಟ
ಯಾದಗಿರಿ : ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹೊಸ ಪ್ರತಿಭೆಗಳು ಹೊರಹೊಮ್ಮಲು ಅವಕಾಶ ಸಿಗುತ್ತದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ ಹೇಳಿದರು.
ವಡಗೇರಾ ತಾಲೂಕಿನ ಕಾಡಂಗೇರಾ (ಬಿ) ಗ್ರಾಮದಲ್ಲಿಕರವೇ (ಪ್ರವೀಣ್ ಶೆಟ್ಟಿ ಬಣ)ದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಗ್ರಾಮೀಣ ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕ್ರೀಡೆ ವ್ಯಕ್ತಿಯ ಜೀವನದ ಶಿಸ್ತು ಮತ್ತು ಸಹಕಾರವನ್ನು ಬೋಧಿಸುವ ಅತ್ಯುತ್ತಮ ಪಾಠಶಾಲೆ. ಗ್ರಾಮೀಣ ಯುವಕರು ಕ್ರೀಡಾ ಕ್ಷೇತ್ರದಲ್ಲೂ ಮುನ್ನಡೆಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಅವರು ಕರೆ ನೀಡಿದರು.
ಕ್ರೀಡೆಗಳು ಸಾಮಾಜಿಕ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಹೆಚ್ಚಿಸುವಲ್ಲಿ ಸಹಕಾರಿ. ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆ ಹೊಸ ಪ್ರತಿಭೆಗಳನ್ನು ಹೊರಹಾಕುವ ವೇದಿಕೆಯಾಗಿದೆ, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಕರು ಮೊಬೈಲ್ ಮತ್ತು ಟಿವಿಗೆ ಹೆಚ್ಚು ಸಮಯ ಮೀಸಲಿಡುತ್ತಿರುವುದು ಚಿಂತಾಜನಕ. ಕ್ರೀಡೆ ಮಾತ್ರ ದೇಹದ ಆರೋಗ್ಯ, ಮನಸ್ಸಿನ ಚುರುಕುತನ ಹಾಗೂ ಶಿಸ್ತು ಕಾಪಾಡುವ ಮಾರ್ಗವಾಗಿದೆ. ಇಂತಹ ಕ್ರೀಡಾಕೂಟಗಳು ಯುವಕರಲ್ಲಿ ನಾಯಕತ್ವ ಭಾವನೆಗಳು ಬೆಳೆಸುತ್ತವೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಓ ಮಲ್ಲಿಕಾರ್ಜುನ ಸಂಗವಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆ ಅತ್ಯವಶ್ಯಕ. ಕ್ರೀಡೆ ದೇಹದ ಆರೋಗ್ಯದ ಜೊತೆಗೆ ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿ. ಇಂತಹ ಕ್ರೀಡಾಕೂಟಗಳು ಯುವಕರಿಗೆ ಪ್ರೇರಣೆಯಾಗುತ್ತವೆ ಎಂದರು.ನಂತರ ಮಾಜಿ ಗ್ರಾ.ಪಂ ಅಧ್ಯಕ್ಷ ಶಿವರೆಡ್ಡಿ ದೇಸಾಯಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಶರಣಪ್ಪ ದೇಸಾಯಿ ಮಾತನಾಡಿ ಸ್ಪರ್ಧೆಯ ಕುರಿತು ಪ್ರಶಂಸಿಸಿದರು.ಪಂದ್ಯಾವಳಿಯಲ್ಲಿ ಕಲಬುರ್ಗಿಯ ಸುಲ್ತಾನಪುರ ತಂಡವು ಪ್ರಥಮ ಬಹುಮಾನ ಪಡೆದು ಗೌರವಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸಿದ್ದರೆಡ್ಡಿ ತಂಗಡಗಿ, ಕರವೇ ಕ.ಕ ಸಂಚಾಲಕ ಶರಣು ಇಟಗಿ, ಕರವೇ ವಡಗೇರಾ ತಾಲೂಕು ಅಧ್ಯಕ್ಷ ಕುಮಾರ ಎಸ್ ತಳಗೇರಿ, ಬಸವರಾಜಪ್ಪ ದೇಸಾಯಿ, ಹಯ್ಯಳಪ್ಪ ಗಾಡಿ, ರಾಜಶೇಖರ್, ದೊಡ್ಡಪ್ಪ, ಶಾಂತಪ್ಪ, ದೇವಿಂದ್ರಪ್ಪ, ಚಂದ್ರಶೇಖರ್ ದೇಸಾಯಿ, ಸಿದ್ದಣ್ಣ ದೇಸಾಯಿ (ಬಿ), ಕರವೇ ಗ್ರಾಮ ಘಟಕ ಅಧ್ಯಕ್ಷ ಶಿವಶರಣ ನಾಯ್ಕೋಡಿ, ಉಪಾಧ್ಯಕ್ಷ ಸುರೇಶ್ ಎಸ್, ಸಿದ್ದರಾಮಪ್ಪ ಹುಂಡೆಕಲ್, ಶರಣಯ್ಯ ಸಾಹುಕಾರ್, ಮಂಜು ವಿಶ್ವಕರ್ಮ, ಯಲ್ಲಪ್ಪ ಯಕ್ಕಳ್ಳಿ, ಸಾಬು ಹೆಡಗಿಮದ್ರಾ, ರಂಗು ನಾಯಕ್, ಬಸ್ಸು ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


