ಯಾದಗಿರಿ : ಭಾರತದ ಅಭಿವೃದ್ಧಿಯಲ್ಲಿ ಯುವಜನಾಂಗದ ಪಾತ್ರ ಅಪಾರವಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಇಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿ ಮಾತನಾಡಿದ ಅವರು, ಭಾರತ ಸಮೃದ್ಧವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಯುವಜನಾಂಗದ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಇಂತಹ ಏಕತಾ ಪಾದಯಾತ್ರೆಗಳು ಉತ್ತಮ ವೇದಿಕೆಯಾಗಲಿವೆ ಎಂದು ಹೇಳಿದರು.
ಎರಡನೇ ವಿಶ್ವ ಯುದ್ಧದಲ್ಲಿ ಹಿರೊಷಿಮಾ-ನಾಗಾಸಾಕಿಗಳ ಮೇಲೆ ಭಯಂಕರ ಬಾಂಬ್ ದಾಳಿಯಾಗಿ,ಇಡೀ ಜಪಾನ್ ದೇಶ ನಲುಗಿ ಹೋಗಿದ್ದ ಸಂದರ್ಭದಲ್ಲಿ ಯುವಜನಾಂಗ ಮೆಟ್ಟಿನಿಂತು,ಆ ದೇಶವನ್ನು ಪುನರ್ ನಿರ್ಮಾಣದಲ್ಲಿ ನೆರವಾದರು.ಕಾರಣ ಭಾರತೀಯ ಯುವಜನಾಂಗ ಕೂಡ ದೇಶ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಈ ರೀತಿಯ ಏಕತಾ ನಡಿಗೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇಣುಗೋಪಾಲ ನಾಯಕ್ ಉಪನ್ಯಾಸ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸಮಾಜ ಸೇವಕ ಬಸವರಾಜ ವಿಭೂತಿಹಳ್ಳಿ, ಪಿಯುಡಿಡಿ ಪಂಡಿತರಾವ್ ಪವಾರ್, ಮೇರಾ ಭಾರತ್ ಯುವ ಕೇಂದ್ರ ದ ಅಧಿಕಾರಿ ಮಯೂರ್ ಕುಮಾರ್, ಪದವಿ ಕಾಲೇಜು ಪ್ರಾಂಶುಪಾಲ ಸುಭಾಸ್ ಚಂದ್ರ ಕೌಲಗಿ, ಪ್ರೋ.ನಾಗಪ್ಪ, ಅಜಯ್ ಮಡ್ಡಿ, ಬಸವರಾಜ್ ಬಲಿಚಕ್ರ ಇತರರು ಉಪಸ್ಥಿತರಿದ್ದರು.


