ಯಾದಗಿರಿ: : ಬರುವ ಡಿಸೆಂಬರ್ ಮಾಹೆಯ ಮೊದಲ ವಾರದಲ್ಲಿ ಆಯೋಜಿಸುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕಾಗಿ ಸಿದ್ದತೆಗಳನ್ನು ಈಗಿನಿಂದಲೇ ಆರಂಭಿಸುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಆಯೋಜನೆ ಕುರಿತು ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು. ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು,ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಮುಖ್ಯ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುವುದರಿಂದ ಶಿಷ್ಟಾಚಾರದಂತೆ ಎಲ್ಲ ವ್ಯವಸ್ಥೆ ಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅಧಿಕಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಅಚ್ಚುಕಟ್ಟಾಗಿ ಮಾಡಬೇಕು.ಊಟೋಪಚಾರ,ಸಾರಿಗೆ ವ್ಯವಸ್ಥೆ, ಕಾರ್ಯಕ್ರಮದ ವೇದಿಕೆ ಸಿದ್ದತೆ, ವಿದ್ಯುತ್,ವಿವಿಧ ಇನ್ನಿತರ ಆರೇಳು ಕಡೆ ವೇದಿಕೆ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಸುರಕ್ಷತಾ ಕ್ರಮಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವಂತೆ ಅವರು ಸೂಚನೆ ನೀಡಿದರು.
ಆಯಾ ಸಮಿತಿಗಳ ಮೂಲಕ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ಅಧಿಕಾರಿ
ಇನ್ನಿತರ ಸುರಕ್ಷತಾ ಕ್ರಮಗಳು, ಜಿಲ್ಲಾ ಕ್ರೀಡಾಂಗಣದಲ್ಲಿನ ಸಿದ್ದತೆಗಳು, ವೇದಿಕೆ ,ಆಸನಗಳ ಸಿದ್ಧತೆ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಸ್ವಾಗತಿಸಿ ಅವಶ್ಯಕ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ,ಎಸ್.ಪಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


