ತಾಲ್ಲೂಕಾ ಕೇಂದ್ರದ ಅಭಿವೃದ್ಧಿಗೆ ಸರ್ಕಾರ ಬದ್ಧ : ಸಚಿವ ದರ್ಶನಾಪೂರ

ಯಾದಗಿರಿ : ನೂತನ ತಾಲ್ಲೂಕಾ ಕೇಂದ್ರವಾಗಿರುವ ವಡಗೇರಾ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು. ಕಂದಾಯ ಇಲಾಖೆಯಿಂದ ವಡಗೇರಾ ಪಟ್ಟಣದಲ್ಲಿ ೮.೬೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಪ್ರಜಾ ಸೌಧ ತಾಲ್ಲೂಕಾ ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
೧ ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದ್ದು, ಇಲ್ಲಿಯೇ ಹಲವಾರು ಸರ್ಕಾರಿ ಇಲಾಖೆಗಳ ಕಚೇರಿಗಳು ಆರಂಭಗೊಳ್ಳಲಿವೆ ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ನಮ್ಮ ಸರ್ಕಾರ ಈಗಾಗಲೇ ರಾಜ್ಯದಲ್ಲಿ ೫೪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಮಂಜೂರು ನೀಡಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ್ಕೆ ೧೬ ಪ್ರಜಾಸೌಧ ತಾಲ್ಲೂಕಾ ಆಡಳಿತ ಕೇಂದ್ರಗಳು ಮಂಜೂರಾಗಿವೆ, ಜಿಲ್ಲೆಯ ಗುರುಮಿಠಕಲ್, ಶಹಾಪೂರ, ಹುಣಸಗಿಯಲ್ಲಿ ಕೂಡ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿ, ವಡಗೇರಾದಲ್ಲಿ ೩೦ ಬೆಡ್‌ಗಳ ಸರ್ಕಾರಿ ಆಸ್ಪತ್ರೆಯನ್ನು ೫೦ ಬೆಡ್‌ಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟದಲ್ಲಿ ೫೫೪ ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಪಡಿಸುತ್ತಿದೆ ಇದರಿಂದ ಬರುವ ದಿನಗಳಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.   ಈಗಾಗಲೇ ಸರ್ಕಾರ ೧೮೦೦ ಕೋಟಿ ವೆಚ್ಚದಲ್ಲಿ ಜಲದಾರೆ ಯೋಜನೆ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿಗಳು ತಲಾ ಶಾಸಕರಿಗೆ ೫೦ ಕೋಟಿ ರೂಪಾಯಿ ವಿಶೇಷ ಅನುಧಾನ ನೀಡಿದ್ದಾರೆ. ಜನರಿಗೆ ಅಗತ್ಯಕ್ಕನುಗುಣವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ೫ ಸಾವಿರ ಕೋಟಿ ರೂಪಾಯಿ ಅನುಧಾನ ನೀಡಿರುವುದರಿಂದ ಎಲ್ಲಾ ಭಾಗದವರಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ನವರು ಹಣಕಾಸು ಖಾತೆ ನಿರ್ವಹಣೆ ಮಾಡುವ ಮೂಲಕ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿರುವ ಭರವಸೆಯಂತೆ ಪಂಚ ಗ್ಯಾರಂಟಿಗಳಿಗೆ ಅನುಧಾನ ಒದಗಿಸುವ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸೂಕ್ತ ಅನುಧಾನ ನೀಡಿ ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಪರಿಣಾಮ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ೫ ಕ್ಷೇತ್ರಗಳಲ್ಲಿ ನಮ್ಮ ಸಂಸದರು ಆಯ್ಕೆ ಯಾದರು ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ ಹಿಂದುಳಿದಿರುವ ವಡಗೇರಾ ತಾಲ್ಲೂಕಿಗೆ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ನೀರಾವರಿ ಇಲಾಖೆಯಿಂದ ೨೦೦ ಕೋಟಿ ರೂಪಾಯಿ ಕಾಮಗಾರಿ ಟೆಂಡರ್ ಕರೆಯಲಾಗುತ್ತಿದೆ. ಬರುವ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಾನು ಈ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಸದನದ ಒಳಗೆ – ಹೊರಗೆ ಧ್ವನಿ ಎತ್ತುವ ಮೂಲಕ ಹಂತ ಹಂತವಾಗಿ ಎಲ್ಲಾ ಸೌಕರ್ಯಗಳನ್ನು ಜನರಿಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ವರ್ಷ ಅತೀವೃಷ್ಠಿಯಿಂದ ಈ ತಾಲ್ಲೂಕಿನಲ್ಲಿ ಅತೀ ಹೆಚ್ಚು ಬೆಳೆ ವ್ಯರ್ಥವಾಗಿದೆ. ಜಿಲ್ಲಾಧಿಕಾರಿಗಳು ಬೆಳೆ ಹಾನಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ನಾನು ಕೂಡ ಪರಿಹಾರ ಒದಗಿಸಿಕೊಡಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಯೋಜನೆ ಮಾಹಿತಿ ನೀಡಿದರು.
ವೇದಿಕೆ ಮೇಲೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನ್‌ಸೂರ್, ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ತಹಸೀಲ್ದಾರ ಮಂಗಳ ಎಮ್., ಗ್ರಾ.ಪಂ. ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ್, ಗೃಹಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗಿರೀಶ್, ಬಸ್ಸುಗೌಡ ಬಿಳ್ಹಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಸಾಹೇಬರೆಡ್ಡಿ ಇಟಗಿ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *

error: Content is protected !!