ಸ್ವಸ್ಥ ನಾರಿ ಸಶಕ್ತ ಪರಿವಾರ : ಉಚಿತ ಪೌಷ್ಟಿಕ ಆಹಾರ ವಿತರಣೆ
ಸುರಪುರ : ಕ್ಷಯ ರೋಗವನ್ನು ಗುಣಪಡಿಸಬಹುದು ಯಾರು ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಸಂಜೀವಕುಮಾರ್ ರಾಯಚೂರಕರ್ ಮಾತನಾಡಿದರು.ತಾಲೂಕಿನ ಹೆಮನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮ ಯಾದಗಿರಿ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸುರಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಅಂಗವಾಗಿ ಉಚಿತ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಆರೋಗ್ಯ ಅಧಿಕಾರಿ ಡಾ. ಆರ್.ವಿ ನಾಯಕ ಮಾತನಾಡಿ, 25 ಜನ ಕ್ಷಯ ರೋಗಿಗಳನ್ನು ಡಾ. ಸಿದ್ದಯ್ಯ ಮಠ ಅವರು ದತ್ತು ಪಡೆದು ಉಚಿತ ಪೌಷ್ಟಿಕಾಂಶ ಆಹಾರ ಕಿಟ್ ಗಳನ್ನು ನೀಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯವಾಗಿದೆ, ತಾವೆಲ್ಲರೂ ಕ್ಷಯ ರೋಗದ ಬಗ್ಗೆ ಭಯಪಡದೆ ಆರೋಗ್ಯ ಇಲಾಖೆ ನೀಡುವ ಮಾರ್ಗದರ್ಶನದಂತೆ ಔಷಧಿಗಳನ್ನು ಸೇವಿಸುವುದು ಹಾಗೂ ಪೌಷ್ಟಿಕಾಂಶಯುಕ್ತ ಕಿಟ್‌ಗಳನ್ನು ಸದುಪಯೋಗ ಮಾಡಿಕೊಂಡು ಗುಣಮುಖರಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಸಿದ್ದಯ್ಯ ಮಠ ಅವರು 25 ಜನ ಕ್ಷಯ ರೋಗಿಗಳನ್ನು ದತ್ತು ಪಡೆದು ಉಚಿತ ಪೌಷ್ಟಿಕ ಆಹಾರಗಳ ಕಿಟ್ ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಿರೀಕ್ಷಣಾಧಿಕಾರಿ ಸಂಗಪ್ಪ ಚೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ನಿಂಗಮ್ಮ, ಕ್ಷಯ ರೋಗ ಮೇಲ್ವಿಚಾರಕ ರಾಘವೇಂದ್ರ ನಾಯಕ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.