ಯಾದಗಿರಿ: ನಿರಂತರ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿರುವ ವಡಗೇರಿ ತಾಲ್ಲೂಕಿನ ನಾಯ್ಕಲ್ ಗ್ರಾಮದ ಜಲಾವೃತ್ತ ಪ್ರದೇಶಗಳಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ಮತ್ತು ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೈನುದ್ದಿನ್ ಎಂ. ಜಮಾದಾರ ದೋರನಳ್ಳಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪಾರ ಮಳೆಯಿಂದಾಗಿ ಭೀಮಾನದಿ ನೀರು ಹೊಲ ಗದ್ದೆಗಳಿಗೆ ಅಲ್ಲದೇ ಮನೆಗಳಿಗೆ ನುಗ್ಗಿದ್ದು, ಅಪಾರ ನಷ್ಟವಾಗಿದೆ, ಸತತ ಮಳೆಯ ಕಾರಣ ವಡಗೇರಿ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, ಅದರಲ್ಲೂ ನಾಯ್ಕಲ್ ಗ್ರಾಮದಲ್ಲಿ ಬೆಳೆ ಹಾನಿ ಜೊತೆಗೆ ಮನೆಯಲ್ಲಿ ನೀರು ನುಗ್ಗಿ ಅಪಾರ ಹಾನಿಯಾಗಿದೆ ಎಂದು ಅವರು ಹೇಳಿದರು.
ಸರ್ಕಾರ ಹಾಗೂ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ಶಾಸಕರಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕರು ಸಹ ಸ್ಥಳಗಳಿಗೆ ಭೇಟಿ ಕೊಟ್ಟು ವಿವರ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಶೀಘ್ರ ಸಂತ್ರಸ್ತರಿಗೆ ಪರಿಹಾರ ಕಾರ್ಯ ನಡೆಯಲಿದೆ ಎಂದು ಹೇಳಿದರು.