ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸಬೇಕು
ಶಹಾಪುರ ವಿದ್ಯಾರ್ಥಿ ಮತ್ತು ಗುರುಗಳ ಸಂಬಂಧ ಪವಿತ್ರವಾದದ್ದು. ಶಿಕ್ಷಣಕ್ಕೆ ಹೆಚ್ಚಿನ ಪರಿಶ್ರಮದ ಅಗತ್ಯ.ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ವಿನಯ ಮಕ್ಕಳಿಗೆ ಕಲಿಸಬೇಕಿದೆ. ಪ್ರತಿ ಕುಟುಂಬದ ಬದುಕು ಬದಲಾಯಿಸಲು ಶಿಕ್ಷಣ ಅತ್ಯಗತ್ಯ ಎಂದು ಸಂಶೋಧಕರು ಮತ್ತು ತಾಲೂಕು ಖಜಾನೆ ಅಧಿಕಾರಿಗಳಾದ ಎಂಎಸ್ ಶಿರವಾಳ ಅವರು ಅಭಿಮತ ವ್ಯಕ್ತಪಡಿಸಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವೃತ್ತಿ ಪವಿತ್ರವಾದದ್ದು.ನನ್ನ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮನೋಭಾವನೆಯಿಂದ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಅಐ ಡಿವಿ ನಾಯಕ್ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬರಬೇಕು, ಮೊಬೈಲ್ ಗಳಿಂದಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚು ತೊಂದರೆಯಾಗುತ್ತಿದೆ ಎಂದರು.
ಪತ್ರಕರ್ತರಾದ ಬಸವರಾಜ ಕರೇಗಾರ ಮಾತನಾಡಿ ಡಿಡಿಯು ಶಿಕ್ಷಣ ಸಂಸ್ಥೆಯು ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೈದಿದೆ. ಕಲ್ಯಾಣ ಕರ್ನಾಟಕದಲ್ಲಿ ಬಡವರು ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ. ಇದರಿಂದ ಬಡ ಮಕ್ಕಳಿಗೆ ಉನ್ನತ ವ್ಯಾಸಂಗ ಸಿಗುವಂತಾಗಿದೆ. ಮುಂದಿನ ದಿನಗಳಲ್ಲಿ ಪದವಿ, ಪಿಜಿ, ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳನ್ನು ಆರಂಭಿಸಿದರೆ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಬಾ. ಭೀಮಣ್ಣ ಮೇಟಿ ಮಾತನಾಡಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಉತ್ತಮ ವಾತಾವರಣವಿರುವ ಕಾಲೇಜು ಲಭಿಸಬೇಕು. ಉತ್ತಮ ಉಪನ್ಯಾಸಕರಿರಬೇಕು.ಆದರೆ ಭವಿಷ್ಯ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಒಳ್ಳೆಯ ಫಲಿತಾಂಶ ಬಂದರೆ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲರಾದ ಕಿರಣ್ ಪತ್ತಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಉಚಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಂಸ್ಥೆ ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿಯವರಿಗೆ ಸನ್ಮಾನಿಸಿದರು.ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಶೇಕಡ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಚಟುವಟಿಕೆಗಳು ನಡೆದವು. ಮಕ್ಕಳು ಶಿಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದರು.