ಕಲಬುರಗಿ : ಕಳೆದ ನಾಲ್ಕು ದಿನಗಳಿಂದ ಸುರಿದ ನಿರಂತರ ಮಳೆಗೆ ಸೇಡಂ ತಾಲೂಕಿನ ಗ್ರಾಮೀಣ ಭಾಗದಲ್ಲಿ ನದಿ ಪಾತ್ರದ ಹಳ್ಳಿಗಳಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಈಗಾಗಲೇ ತಾಲೂಡಾಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ, ಗಂಜಿ ಕೇಂದ್ರ ಸ್ಥಾಪನೆ ಸೇರಿದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚಿಸಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ತಾಲೂಕಿನ ಸಟಪಟನಳ್ಳಿ, ಸುರವಾರ, ಬಿಬ್ಬಳ್ಳಿ, ಸಂಗಾವಿ, ಕರ್ಚಖೇಡ, ಮಳಖೇಡ ಗ್ರಾಮಗಳಲ್ಲಿ ನದಿ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದ್ದು ವಿಎ ಹಾಗೂ ಪಿಡಿಓಗಳು ಸ್ಥಳದಲ್ಲಿ ಹಾಜರಿದ್ದು ತಾಲೂಕಾಡಳಿತಕ್ಕೆ ಮಾಹಿತಿ ರವಾನಿಸುವಂತೆ ತಿಳಿಸಲಾಗಿದೆ.
ಹೆಚ್ಚಿನ ಮುಂಜಾಗ್ರತಾ ಸೂಚನೆಗಾಗಿ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ಸಹಾಯಕ ಆಯುಕ್ತರು ಹಾಗೂ ತಹಶಿಲ್ದಾರರೊಡನೆ ಸಂವಹನ ನಡೆಸಿ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ವರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಸೇಡಂ ನಗರದ ಇನ್ಫೋಸಿಸ್ ಕಾಲೋನಿಯಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಮನೆಗಳಿಗೆ ನೀರು ನುಗ್ಗಿರುವ ಮಾಹಿತಿಯೊಂದಿಗೆ ಪುರಸಭೆ ಆಡಳಿತ, ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಸುಧಾರಿಸಲು ಯಶಸ್ವಿಯಾಗಿದ್ದಾರೆ.
ಸಟಪಟನಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಚಿಂಚೋಳಿ-ಸೇಡಂ ಮಾರ್ಗ ಸ್ಥಗಿತಗೊಂಡಿದ್ದು, ವಿಡಿಯೋ ಕಾಲಿಂಗ್ ಮುಖಾಂತರ ವೀಕ್ಷಣೆ ಮಾಡಿ, ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಪೋಲಿಸರಿಗೆ ಹಾಗೂ ತಾಲೂಕಾಡಳಿತಕ್ಕೆ ಸೂಚಿಸಿದೆ.
ತಾಲೂಕಾಡಳಿತ ಕಾರ್ಯದೊಂದಿಗೆ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ್ ಹಾಗೂ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಭಾಗಿಯಾಗಿ ಪರಿಶೀಲನೆ ನಡೆಸಿದರು.