ಮುಖ್ಯಮಂತ್ರಿಗಳಿಂದ ಮಳೆಹಾನಿ ಬಗ್ಗೆ ಚರ್ಚೆ:
ಕಲಬುರಗಿ : ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಬೆಳೆ ನಷ್ಟದ ಅಂದಾಜನ್ನು ಸಮೀಕ್ಷೆ ಮಾಡಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟವನ್ನು ಸಮೀಕ್ಷೆ ಮಾಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೆ ಪ್ರಾಥಮಿಕ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು 2025ರ ಜನವರಿ ತಿಂಗಳಿನಿಂದ 2025 ರಿಂದ ಆಗಸ್ಟ್‌ವರೆಗೆ 698.4 ಮೀ. ಮಿ ಮಳೆ ಆಗಿದ್ದು ಇದು ವಾಡಿಕೆ ಶೇ.49ರಷ್ಟು ಹೆಚ್ಚುವರಿ ಮಳೆ ಸುರಿದಿರುವುದು ವರದಿಯಾಗಿದೆ. ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಶೇ.69ರಷ್ಟು ಹೆಚ್ಚಿನ ಮಳೆಯಾಗಿದ್ದುಇದರಿಂದ ಜಿಲ್ಲೆಯಾದ್ಯಂತ 1,05,967 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆನಷ್ಟವುಂಟಾಗಿರುವ ಬಗ್ಗೆ ಪ್ರಾಥಮಿಕ ವರದಿ ತಿಳಿಸಿವೆ, ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಮಳೆ ಆಗಿರುವ ಕಾರಣ ಹೆಸರು ಬೆಳೆ ಹಾಗೂ ಉದ್ದು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಆಗಸ್ಟ್ ಮಾಹೆಯಲ್ಲಿ ಹೆಚ್ಚುವರಿ ಮಳೆಯಿಂದಾಗಿ ಕಟಾವಿನ ಸಂದರ್ಭದಲ್ಲಿ ಈ ಬೆಳೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬರುತ್ತಿವೆ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಆವರು ಬೆಳೆನಷ್ಟದ ನಿಖರ ಮಾಹಿತಿ ಜಿಲ್ಲಾಧಿಕಾರಿಗಳ ವರದಿಯ ನಂತರವಷ್ಟೇ ತಿಳಿಯುತ್ತದೆ ಎಂದೂ ಹೇಳಿದ್ದಾರೆ. ಸರ್ವೆ ನಂಬರ್‌ವಾರು ಸಮೀಕ್ಷೆ ನಡೆಯುತ್ತಿದ್ದು, ಸಂಪೂರ್ಣ ವಿವರ ಲಭಿಸಿದ ನಂತರ ಪರಿಹಾರ ಮಂಜೂರಾತಿ ಸಂಬಂಧ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಆಗಿರುವ ಬೆಳೆ ನಷ್ಟದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿರುತ್ತಾರೆ. ಸರ್ಕಾರದಿಂದ ರೈತರಿಗೆ ತಾತ್ಕಾಲಿಕ ಪರಿಹಾರ ನೀಡಲು ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ರೈತರು ಹಾಗೂ ಮನೆ ಬಿದ್ದು ಮೃತಪಟ್ಟಿದ್ದುಇಬ್ಬರು ಮೃತರಾಗಿದ್ದಾರೆ, ಮಳೆಯಿಂದಾಗಿ ಜಿಲ್ಲೆಯ 696 ಮನೆಗಳು ಉರುಳಿವೆ, 103 ಜಾನುವಾರುಗಳು ಸತ್ತಿವೆ ಎಂಬ ಮಾಹಿತಿ ನೀಡಿದ್ದಾರೆ. ಪ್ರಾಣಹಾನಿ ಹಾಗೂ ಮಳೆಯಿಂದಾಗಿ ಸಂಭವಿಸಿದ ಜಾನುವಾರು ಹಾನಿ, ಮನೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾ ಆಡಳಿತದ ವತಿಯಿಂದ 18 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಮುಖ್ಯಮಂತ್ರಿಗಳು ನೆರವನ್ನು ಪ್ರಕಟಿಸಲಿದ್ದು, ಕೂಡಲೇ ಬೆಳೆನಷ್ಟವನ್ನು ರೈತರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.