ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಅಹಲ್ಯೆ ಬಾಯಿಯರ ಸಾಹಸ ಮಹಿಳೆಯರಿಗೆ ಸ್ಪೂರ್ತಿ | ಡಾ ಮೇಘಾ ಖಂಡೇಲವಾಲ

ಕಲಬುರ್ಗಿ : ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಉಲ್ಲಾಳದ ರಾಣಿ ಅಬ್ಬಕ್ಕ ಜೀವನ, ಶೌರ್ಯ, ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಅಬ್ಬಕ್ಕಳ ಸ್ವಾಭಿಮಾನ, ಧೈರ್ಯ ಇಂದಿನ ಮಹಿಳೆಯರಲ್ಲಿ ಇರಬೇಕು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಡಾ ಮೇಘಾ ಖಂಡೇಲವಾಲ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಮಹಾವಿದ್ಯಾಲಯದ ಮಹಿಳಾ ಕೋಶ, ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹಿಳಾ ಯೋಧರು ರಾಣಿ ಅಬ್ಬಕ್ಕ ಚೌತ್, ಕಿತ್ತೂರು ರಾಣಿ ಚನ್ನಮ್ಮ ಮತ್ತು ಲೋಕಮಾತೆ ಅಹಲ್ಯೆ ಬಾಯಿ ಹೋಳ್ಕರ್ ಜೀವನ ಕುರಿತು ಒಂದು ದಿನದ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.ರಾಣಿ ಅಬ್ಬಕ್ಕ ಕೆಚ್ಚೆದೆಯ ಹೋರಾಟದಿಂದ ಉಲ್ಲಾಳಕ್ಕೆ ಜಯ ದೊರೆತಿತ್ತು. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರಿಗೆ ಅಧಿಕಾರ, ಗೌರವ ನೀಡಲಾಗುತ್ತಿದೆ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ, ಅಹಲ್ಯೆ ಬೋಯಿ ಹೋಳ್ಕರ್,ಒನಕೆ ಓಬವ್ವ ಅವರಂತಹ ಶಕ್ತಿಶಾಲಿ ಮಹಿಳೆಯರು ಅದಕ್ಕೆ ಸಾಕ್ಷಿ ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಮಹಿಳಾ ಕೋಶದ ಸಂಚಾಲಕಿ ಡಾ ಮೈತ್ರಾದೇವಿ ಹಳೆಮನಿ ಮಾತನಾಡಿ ರಾಣಿ ಅಬ್ಬಕ್ಕ,ಕಿತ್ತೂರು ಚೆನ್ನಮ್ಮ , ಅಹಲ್ಯೆ ಬಾಯಿ ಹೋಳ್ಕರ್ ಇವರು ಕೇವಲ ರಾಣಿಯರು ಮಾತ್ರ ಅಲ್ಲ ಇತಿಹಾಸ ಬದಲಿಸಿದ ವೀರನಾರಿಯರು. ಅವರ ಜೀವನ ಸಾಧನೆ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಈ ದಿಶೆಯಲ್ಲಿ ಸರ್ಕಾರಗಳು ಪಠ್ಯ ಪುಸ್ತಕಗಳಲ್ಲಿ ಇವರ ನೈಜ ಜೀವನ ಚರಿತ್ರೆಗಳನ್ನು ತಿಳಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ, ರಾಜಶೇಖರ ಬೀರನಳ್ಳಿ, ಡಾ ನೀಲಕಂಠ ವಾಲಿ ಉಪಸ್ಥಿತರಿದ್ದರು, ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಲ್ಲಪ್ಪ ಬೋತಗಿ ವಹಿಸಿದ್ದರು.ರಾಷ್ಟೀಯ ಸೇವಾ ಯೋಜನೆ ಅಧಿಕಾರಿ ಡಾ ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!