ಸುಸಜ್ಜಿತ ರಂಗಮಂದಿರವನ್ನಾಗಿಸುವುದು ನನ್ನ ಬಹುದಿನದ ಕನಸು ನನಸಾಗಿದೆ | ಸಚಿವ ಪ್ರಿಯಾಂಕ್ ಖರ್ಗೆ

ನವೀಕರಣಗೊಂಡ ಎಸ್ ಎಂ ಪಂಡಿತ ರಂಗಂಮದಿರ ಉದ್ಘಾಟನೆಗೆ ಸಜ್ಜು

ಹೈಲೈಟ್ಸ್ :

ನವೀಕರಣಕ್ಕಾಗಿ ಕೆಕೆಆರ್ ಡಿಬಿ ಯಿಂದ ರೂ 4.80 ಕೋಟಿ ಅನುದಾನ ಬಿಡುಗಡೆ.

– ಉನ್ನತ ಗುಣಮಟ್ಟದ ಆಸನ, ಸೌಂಡ್ ಸಿಸ್ಟಂ, ಬಗೆಬಗೆ ಬಣ್ಣದ ಲೈಟಿಂಗ್ ಅಳವಡಿಕೆ.

-ಪ್ರೇಕ್ಷಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ

– ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿಯಿಂದಾಗಿ ಸುಸಜ್ಜಿತಗೊಂಡ ರಂಗಮಂದಿರ.

ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಎಸ್ ಎಂ ಪಂಡಿತ ಹೆಸರಿನ ರಂಗಮಂದಿರಕ್ಕೆ ಮೆರಗು, ಸಚಿವರ ಬಹುದಿನದ‌‌ ಕನಸು ನನಸು.

ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ‌ ಎಸ್ ಎಂ ಪಂಡಿತ ರಂಗಮಂದಿರ ಇದೀಗ ನವೀಕರಣಗೊಂಡು ಉದ್ಘಾಟನೆಗೆ ಸಜ್ಜು

ಕಲಬುರಗಿ : ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ನಗರ ಸಾಹಿತ್ಯಾಸಕ್ತರಿಗೆ ಹಾಗೂ ಸಂಗೀತ ಪ್ರೇಮಿಗಳ ನೆಚ್ಚಿನ‌ ತಾಣವಾಗಿದ್ದ ಎಸ್ ಎಂ ಪಂಡಿತ ರಂಗಮಂದಿರ ಇದೀಗ ನವೀಕರಣಗೊಂಡು ನವವಧುವಿನಂತೆ ಕಂಗೊಳಿಸುತ್ತಿದೆ.

2009 ರಲ್ಲಿ ನಿರ್ಮಾಣಗೊಂಡಿದ್ದ ಈ ರಂಗಮಂದಿರ ನೈಸರ್ಗಿಕವಾಗಿ ಕಾಲಾನುಕ್ರಮೇಣ ಕೆಲ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಒಂದು ಸುಸಜ್ಜಿತ ರಂಗಮಂದಿರ ಮಾಡಬೇಕಾದರೆ ಕೈಗೆತ್ತಿಕೊಳ್ಳಬೇಕಿರುವ ದುರಸ್ತಿ ಕಾರ್ಯ ಹಾಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ನಿರ್ಣಯ ಕೈಗೊಂಡು ವಿಶೇಷ ಆಸಕ್ತಿವಹಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜನೇವರಿ ಕೊನೆಯ ವಾರದಲ್ಲಿ‌ ರಂಗಮಂದಿರ ನವೀಕರಣಕ್ಕೆ ಗುದ್ದಲಿ ಪೂಜೆ‌ ನೆರವೇರಿಸಿದ್ದರು. ಅರು ತಿಂಗಳ‌ ನಿರಂತರ ಕೆಲಸ ಕಾರ್ಯಗಳ ನಂತರ ರಂಗಮಂದಿರ ಕಂಗೊಳಿಸುತ್ತಿದೆ.

ಅನುದಾನ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ 2024-25 ನೇ ಸಾಲಿನ ಮ್ಯಾಕ್ರೋ ಯೋಜನೆಯಡಿಯಲ್ಲಿ ರೂ 4.80 ಕೋಟಿ ಅನುದಾನ ಬಿಡುಗಡೆ ಮಾಡಿಸಿದ ಸಚಿವರು ತಮ್ಮ ಕನಸಿನ ರಂಗಮಂದಿರದ ರೂಪುರೇಷಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲಿಂದ ಪ್ರಾರಂಭವಾದ ನವೀಕರಣ ಕಾರ್ಯ ಇದೀಗ ಮುಗಿದಿದ್ದು ಇನ್ನೇನು ಉದ್ಘಾಟನೆಗೆ ಅಣಿಯಾಗಿದೆ.

ಸೌಲಭ್ಯಗಳು ಆಸನಗಳು

ಎಸ್ ಎಂ ಪಂಡಿತ ರಂಗಮಂದಿರದ ಒಳಗಡೆ ನೆಲಮಹಡಿಯಲ್ಲಿ 552 ಆಸನಗಳನ್ನು ಹಾಗೂ‌ ಮೊದಲ ಮಹಡಿಯಲ್ಲಿ 303 ಆಸನಗಳನ್ನು ಸೇರಿಸಿ ಒಟ್ಟು 855 ಆಸನಗಳನ್ನು ಹೊಂದಿದೆ. ಈ ಹಿಂದೆ ಎಲ್ಲ ಆಸನಗಳನ್ನು ಬದಲಾಯಿಸಿ ನೂತನ ಮಾದರಿಯ ಪುಷ್ ಬ್ಯಾಕ್ ( ಹಿಂದಕ್ಕೆ ತಳ್ಳುವ ) ಉತ್ತಮ ಗುಣಮಟ್ಟದ ಆಸನಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಆಸನಗಳಿಗೆ ನೀರಿನ ಬಾಟಲ್ ಇಡಲು ಅನುಕೂಲವಾಗಂತ ಸೌಲಭ್ಯವೂ ಕೂಡಾ ಇದ್ದು ಇದರಿಂದ ಯಾವುದೇ ಸಮಸ್ಯೆಯಾಗದಂತೆ ವೀಕ್ಷಕರು ಕಾರ್ಯಕ್ರಮಗಳನ್ನ ಆಸ್ವಾದಿಸಬಹುದು.

ಇಡೀ‌ ರಂಗಮಂದಿರ ಒಳ ಹಾಗೂ ಹೊರಭಾಗಕ್ಕೆ ಕಣ್ಣಿಗೆ ಮುದ‌ನೀಡುವ ವಿವಿಧ ಬಗೆಯ ಬಣ್ಣಗಳನ್ನು ಬಳಿಯುವ ಮೂಲಕ ರಂಗುಗೊಳಿಸಲಾಗಿದೆ.

ವೇದಿಕೆ

ರಂಗಮಂದಿರದ ವೇದಿಕೆಯನ್ನ ಜಗಮಗಿಸುವ ಬಣ್ಣಬಣ್ಣದ ವಿದ್ಯುತ್ ಅಲಂಕಾರದ ಲೈಟ್ ಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ಹೊಂದಿಕೊಳ್ಳುವಂತ ಉತ್ತಮ ಹಾಗೂ ಬೆಲೆಬಾಳುವ ಪರದೆಗಳನ್ನು ( ಕರ್ಟನ್ ) ಗಳನ್ನು ಅಳವಡಿಸಲಾಗಿದೆ. ಇದರಿಂದ ವೇದಿಕೆಯ ಮೇಲಿನ ಕಾರ್ಯಕ್ರಮಗಳಿಗೆ ಮೆರಗು ನೀಡುತ್ತದೆ.

ಲೈಟಿಂಗ್ಸ್ ಹಾಗೂ ಸೌಂಡ್ ಸಿಸ್ಟಂ

ರಂಗಮಂದಿರವನ್ನು ಮತ್ತೊಮ್ಮೆ ನೂತನವಾಗಿ ಎಲೆಕ್ಟ್ರಿಕಲ್ ವೈರಿಂಗ್ ಮಾಡಲಾಗಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆ ಕಾಣಿಸುವುದಿಲ್ಲ. ತುರ್ತು ಸಂದರ್ಭದಲ್ಲಿ ಜನರೇಟರ್ ಬಳಕೆ ಮಾಡುವ ಸೌಲಭ್ಯ ಕೂಡಾ ಒದಗಿಸಲಾಗಿದೆ.

ರಂಗಂದಿರಕ್ಕೆ ಅನುಕೂಲವಾಗುವಂತೆ ಹಾಗೂ ಪ್ರತಿಧ್ವನಿಯಾಗದಂತ ಅತ್ಯಾಧುನಿಕ ನೂತನ ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಇಡೀ‌ ರಂಗಮಂದಿರದಲ್ಲಿ ಎಲ್ಲಾ ಕಡೆಗೆ ತಲುಪುವಂತೆ ಪ್ರೇಕ್ಷಕರಿಗೆ ಕಿವಿಗೆ ಇಂಪು ನೀಡುವಂತ ತಂತ್ರಜ್ಞಾನ ಉಳ್ಳ ಸೌಂಡ್ ಸಿಸ್ಟಂ ಇದಾಗಿದ್ದು ರಂಗಮಂದಿರಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.

ಹವಾನಿಯಂತ್ರಿತ

ಕಾರ್ಯಕ್ರಮಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಬಿಸಿಲು ಹಾಗೂ ದಗೆಯ ಅನಾನುಕೂಲವಾಗದಂತೆ ಅಗತ್ಯ ಕ್ರಮವಹಿಸಲು ರಂಗಮಂದಿರದಲ್ಲಿದ್ದ ಹವಾನಿಯಂತ್ರಿತ ಯಂತ್ರಗಳನ್ನು ಮತ್ತೊಮ್ಮೆ ಅಗತ್ಯ ರಿಪೇರಿ ಮಾಡಲಾಗಿದೆ.

ನೆಲಹಾಸುಗಳು

ಈ ಹಿಂದೆ ಹಾಕಲಾಗಿದ್ದ ಟೈಲ್ಸ್ ಗಳನ್ನು ತೆಗೆದು ನೂತನಬಗೆಯ ಬೇರೆ ಬೇರೆ ಬಣ್ಣಗಳ ಟೈಲ್ಸ್ ಹಾಗೂ ಗ್ರಾನೈಟ್ ಗಳನ್ನು ಹಾಕಲಾಗಿದ್ದು ಆಕರ್ಷಕವಾಗಿವೆ.

ಶೌಚಾಲಯ

ರಂಗಮಂದಿರದಲ್ಲಿ ಪುರುಷರಿಗಾಗಿ 4 ಹಾಗೂ ಮಹಿಳೆಯರಿಗಾಗಿ 4 ಸೇರಿದಂತೆ ಒಟ್ಟು 8 ಶೌಚಾಲಯಗಳಿದ್ದು. ಶೌಚಾಲಯದಲ್ಲಿದ್ದ ಹಳೆಯದಾದ ಎಲ್ಲ ಟೈಲ್ಸ್ ಹಾಗೂ ಇತರೆ ವಸ್ತು ಗಳನ್ನು ಬದಲಾಯಿಸಲಾಗಿದೆ.

ಕುಡಿಯುವ ನೀರು

ರಂಗಮಂದಿರಕ್ಕೆ ಕಾರ್ಯಕ್ರಮ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ನೀರಿನ ದಾಹ ನೀಗಿಸಲು ಶುದ್ದ ಕುಡಿಯುವನೀರು ಒದಗಿಸುವ ಸೌಲಭ್ಯ ವಹಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ
ಕಾರ್ಯಕ್ರಮ ವೀಕ್ಷಣೆಗೆ ವಾಹನದಲ್ಲಿ ಬರುವ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ಸುಸಜ್ಜಿತ ರಂಗಮಂದಿರವನ್ನಾಗಿಸುವುದು ನನ್ನ ಬಹಳ ದಿನದ ಕನಸಾಗಿತ್ತು.

ಕಲಬುರಗಿ ನಗರದ ಸಾಹಿತ್ಯಾಸಕ್ತರ ಮನತಣಿಸಲು ಈಗಿನ ಅಗತ್ಯಕ್ಕೆ ತಕ್ಕಂತೆ ರಂಗಮಂದಿರವನ್ನು ನವೀಕರಣಗೊಳಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿ ಕೀರ್ತಿ ಬೆಳಗಿಸಿದ ಚಿತ್ರ ಕಲಾವಿದರಾದ ಎಸ್ ಎಂ ಪಂಡಿತ್ ಅವರ ಹೆಸರಿನ ರಂಗಮಂದಿರವನ್ನು ಒಂದು ಸುಸಜ್ಜಿತ ರಂಗಮಂದಿರವನ್ನಾಗಿಸುವುದು ನನ್ನ ಬಹಳ ದಿನದ ಕನಸಾಗಿತ್ತು. ಅಂದುಕೊಂಡಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಧ್ಯದಲ್ಲೇ ನಗರದ ನಾಗರಿಕರ ಅನುಕೂಲಕ್ಕಾಗಿ ಉದ್ಘಾಟನೆ ಮಾಡಲಾಗುವುದು.

ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ನಾಗರಿಕರ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರ

ನಿರ್ಮಿತಿ ಕೇಂದ್ರಕ್ಕೆ ನವೀಕರಣ ಕಾಮಗಾರಿ ಒಪ್ಪಿಸಿದ ನಂತರ ಪ್ರತಿ ಹಂತದಲ್ಲೂ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ರಂಗಮಂದಿರಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇರುವುದರಿಂದ ಎಲ್ಲಿವೂ ಲೋಪವಾಗದಂತೆ ನೋಡಿಕೊಳ್ಳಲಾಗುವುದು. ಇದು ಕಲಬುರಗಿ ನಾಗರಿಕರ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಲಿದೆ.

ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *

error: Content is protected !!