ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಕಾರ್ಯಾಗಾರ:
ಕಲಬುರಗಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸುವ ಗುರಿ ಇಟ್ಟುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವ್ಹಿ. ರಶ್ಮಿ ಮಹೇಶ ಅವರು ಹೇಳಿದರು.
ಅವರು ಸೋಮವಾರ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಕಲಬುರಗಿಯ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ತಾಲೂಕಾವಾರು ವಿಷಯ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳು ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಫಲಿತಾಂಶ ನೂರಕ್ಕೆ ನೂರರಷ್ಟು ಸಾಧಿಸುವ ಗುರಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಪ್ರತಿ ಶಾಲೆಯಲ್ಲಿ ಮಕ್ಕಳ ಕಲಿಕಾ ಮಟ್ಟ ಆಧರಿಸಿ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು. ಶಿಕ್ಷಕರು ಮಾತ್ರವಲ್ಲದೇ ಎಲ್ಲಾ ಹಂತದ ಅಧಿಕಾರಿಗಳು ಬರುವ ಮೂರು ತಿಂಗಳು ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಸೂಚಿಸಿದರು.
ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಪಾಂಡ್ವೆ ರಾಹುಲ್ ತುಕಾರಾಮ ಅವರು ಮಾತನಾಡಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಯ ಹಿನ್ನೆಲೆಯಲ್ಲಿ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ನೀಲ ನಕ್ಷೆಯಂತೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ಪರಿಚಯ ಮಾಡಿಕೊಳ್ಳಬೇಕು. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗೆ ಎಲ್ಲರೂ ಶ್ರಮಿಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಇನ್ನು 14 ವಾರಗಳು ಬಾಕಿ ಇರುವದರಿಂದ ಪ್ರತಿ ವಾರದಲ್ಲಿ ಮಕ್ಕಳ ಕಲಿಕೆಯನ್ನು ದಾಖಲಿಸಲು ಅಭ್ಯಾಸದ ಹಿಂಬಾಲಿಕೆ (ಖಿಡಿಚಿಛಿಞiಟಿg) ಯನ್ನು ಎಲ್ಲಾ ಶಾಲೆಗಳಲ್ಲಿ ಅನುಸರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವಾರ ಸಿಂಗ್ ಮೀನಾ ಅವರು ಮಾತನಾಡಿ, ಜಿಲ್ಲೆಯ ಫಲಿತಾಂಶ ರಾಜ್ಯದ ಸರಾಸರಿಗಿಂತ ಕಡಿಮೆ ಇರುವದರಿಂದ ಕಲಬುರಗಿ ಜಿಲ್ಲಾ ಪಂಚಾಯಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲಾ ಅಧಿಕಾರಿಗಳು, ಶಿಕ್ಷಕರು ಸಕ್ರಿಯೆವಾಗಿ ಅದರಲ್ಲಿ ತೊಡಗಿಸಿಕೊಂಡು ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು ಎಂದರು.
ಈ ಕಾರ್ಯಾಗಾರದಲ್ಲಿ ವಿಷಯ ಸಂಪನ್ಮೂಲ ಶಿಕ್ಷಕರು, ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಶಿಕ್ಷಣಾಧಿಕಾರಿಗಳು, ಮೂರು ಜಿಲ್ಲೆಗಳ ಪ್ರತಿಯೊಂದು ತಾಲೂಕಿನ ಆರು ವಿಷಯಗಳ ಆರು ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಒಟ್ಟು 168 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.


