ಗಾಣಗಾಪೂರ,ಸೊನ್ನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ:
ಕಲಬುರಗಿ,ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಕಾರಣ ಪ್ರವಾಹದ ಬೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಗಾಣಗಾಪುರ, ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆ ಮಾಡಿ ಸಂತ್ರಸ್ತರ ಅಹವಾಲು ಆಲಿಸಿದರು.
ಮೊದಲಿಗೆ ದೇವಲ ಗಾಣಗಾಪೂರಕ್ಕೆ ಭೇಟಿ ನೀಡಿದ ಸಚಿವರು, ಗಾಣಗಾಪೂರ-ಇಟಗಾ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿರುವುದನ್ನು ವೀಕ್ಷಿಸಿದರು. ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಪ್ರತಿ ವರ್ಷ ಪ್ರವಾಹ ಬಂದಾದ ಈ ಸೇತುವೆ ಮುಲುಗಡೆಯಾಗಿ ಸಂಪರ್ಕ ಕಡಿತವಾಗುತ್ತಿದೆ. ಸೇತುವೆ ಎತ್ತರ ಹೆಚ್ಚಿಸಿ ಶಾಶ್ವತ ಪರಿಹಾರ ಒದಗಿಸಿ ಎಂದು ಸಚಿವರಲ್ಲಿ ಬೇಡಿಕೊಂಡರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಪ್ರವಾಹ ತಗ್ಗಿದ ಬಳಿಕ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಅಭಯ ನೀಡಿದ ಅವರು, ಪೃವಾಹದಿಂದ ಗ್ರಾಮಸ್ಥರಿಗೆ ಕಲುಷಿತ ನೀರು ಪೂರೈಕೆಯಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಶುದ್ಧೀಕರಿಸಿದ ಕುಡಿಯುವ ನೀರು ಸಾರ್ವಜನಿಕರಿಗೆ ಪೂರೈಕೆ ಮಾಡಬೇಕು ಎಂದು ತಾಲೂಕ ಪಂಚಾಯತ್ ಇ.ಓ.ಗೆ ಸೂಚನೆ ನೀಡಿದರು.
ಗಾಣಗಾಪೂರದ ಯಾತ್ರಿಕ ನಿವಾಸದಲ್ಲಿ ತೆರಯಾಲಾಗಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದ ಸಚಿವರು ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು. ಸಮತ್ರಸ್ತರಿಗೆ ಊಟೋಪಚಾರ ಜೊತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ ಅವರು,ನಂತರ ಸಂಗಮಕ್ಕೆ ತೆರಳುವ ಸಂಪರ್ಕ ಕಡಿತವಾಗಿರುವುದನ್ನು ಸಹ ವೀಕ್ಷಿಸಿದರು.
ಇನ್ನು ಮಾರ್ಗ ಮಧ್ಯೆ ಸಚಿವರು ಚೌಡಾಪುರ ಗ್ರಾಮದಲ್ಲಿ ಸರ್ವೆ ನಂ.6/3 ರಲ್ಲಿನ ಹೇಮಾ ಅಶೋಕ, 6/1 ರಲ್ಲಿ ಧನಶ್ರೀ ಕಿಶೋರ ಮತ್ತು 6/2 ರಲ್ಲಿನ ಚಂದಪ್ಪ ಗುರಪ್ಪ ಅಂಬಾಡಿ ಅವರ ಹೊಲದಲ್ಲಿ ಬೆಳೆದ ತೊಗರಿ ಬೆಳೆ ಹಾನಿ, ಮಲ್ಲಾಬಾದ ಗ್ರಾಮದಲ್ಲಿನ ಟೊಮಾಟೋ ಹಾಗೂ ಅಫಜಲಪೂರ ಗ್ರಾಮದಲ್ಲಿನ ಸರ್ವೆ ನಂ.678 ರಲ್ಲಿನ ಹತ್ತಿ ಬೆಳೆ ಮತ್ತು
ಸರ್ವೆ ನಂ. 356/12 ರಲ್ಲಿ ಸುಮಾರು 1.40 ಹೆಕ್ಟೇರ್ ಪ್ರದೇಶದಲ್ಲಿ ವಿನೋದ್ ಬಸವರಾಜ್ ನಿಂಬಾಳ ಅವರು ಬೆಳೆದ ಉಳ್ಳಾಗಡ್ಡಿ ಹಾನಿ ಪ್ರದೇಶ ವೀಕ್ಷಿಸಿದರು.
ವಿಧಾನ ಪರಿಷತ್ ಶಾಸಕ ಜಯದೇವ ಗುತ್ತೆದಾರ, ಕಲಬುಎಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಮುಖಂಡ ಅರುಣಕುಮಾರ ಪಾಟೀಲ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಮಗ್ ಮೀನಾ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ ಬಿರಾದಾರ, ತಹಶೀಲ್ದಾರ ಸಂಜೀವಕುಮಾರ ದಾಸರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.