ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ‌ ಮಹಾನ್ ಪುರುಷರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಬ್ಬರು

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

ಕಲಬುರಗಿ,  ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ 19 ಮತ್ತು 20ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ ಎಂದು ವಿಧಾನ ಪರಿಷತ್‍ನ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಬುಧವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಬುರಗಿಯಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಇಷ್ಟೋಂದು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಎಂದು ನಾನು ಅಂದುಕೊಂಡಿರಲ್ಲಿಲ್ಲ. ನಿಜವಾಗಿಯೂ ತುಂಬಾ ಸಂತೋಷವಾಗುತ್ತಿದೆ. ಒಂದೇ ಜಾತಿ ಒಂದೇ ಮತ, ಒಬ್ಬನೇ ದೇವರೆಂದು, ಗುರುಗಳು ಸಾರಿದ ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.

ಅರವಿಪುರಂನಲ್ಲಿ ದೇವಾಲಯವನ್ನು ನಿರ್ಮಿಸಿ ಶೂದ್ರರಿಗೆ ಹಾಗೂ ದಲಿತರಿಗೆ ಹಾಗೂ ಶೋಷಣೆಗೆ ಒಳಗಾದ ಜಾನಾಂಗಕ್ಕೆ ದೇವಾಲಯವನ್ನು ಪ್ರವೇಶಿಸಿ ಪೂಜೆ ಮಾಡುವ ವ್ಯವಸ್ಥೆಯನ್ನು ಕಲ್ಪಸಿ ಕೊಟ್ಟ ಮಹಾನ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದ ಅವರು, ಬ್ರಹ್ಮಶ್ರೀ ಗುರುಗಳು ಒಂದು ಜನಾಂಗ, ಜಾತಿಗೆ ಸೇರಿದವರಲ್ಲ, ಸಕಲ ಮಾನವರ ಏಳಿಗೆಗೆ ದುಡಿದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ
ಪೂಜ್ಯ ಡಾ. ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಡಿಗ ಸಮಾಜವನ್ನು ಬಹಳಷ್ಟು ನೋವು ಪೆಟ್ಟುನ್ನು ತಿಂದಿದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೆವೆ. ಈಡಿಗ ಸಮಾಜದ 16 ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಮುಂದಿನ ಜನೇವರಿ ಮಾಹೆಯಲ್ಲಿ ಕರದಾಳ ಶಕ್ತಿಪೀಠದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು,‌ಸಮಾಜ ಬಾಂಧವರು ಇದಕ್ಕೆ ಸಹಕಾರ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದಂತೆ ಜಾತಿ ರಹಿತ ಸಮಾಜ ನಿರ್ಮಿಸುವಲ್ಲಿ ಬ್ರಹ್ಮಶ್ರೀ ಕೊಡುಗೆ ಅಪಾರವಾಗಿದೆ‌. ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲರು ಸಾಗಬೇಕಾಗಿದೆ ಎಂದರು. ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಅವರು ಸಹ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ 23 ಜನ ಸಾಧಕರಿಗೆ ಜಿಲ್ಲಾ ಮಟ್ಟದ ಬ್ರಹ್ಮ ಶ್ರೀ ನಾರಾಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಾಳಾದ ಮೂಕ ಕಟ್ಟಿಮನಿ ಹಿರೇಮಠದ ಪೂಜ್ಯರಾದ ಗುರುಮೂರ್ತಿ ಶಿವಾಚಾರ್ಯರು, ಚಿತ್ರದುರ್ಗದ ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ, ನಟ ವಿಜಯ ರಾಘವೇಂದ್ರ, ಮುಖಂಡರಾದ ರಾಜು ಬಿ. ಗುತ್ತೇದಾರ, ಹರ್ಷಾನಂದ ಎಸ್. ಗುತ್ತೆದಾರ, ರಾಜೇಶ ಡಿ.ಗುತ್ತೇದಾರ,‌ವಿನಯ್ ಬಿ. ಗಯತ್ತೇದಾರ ಸೇರಿದಂತೆ ಸಮಾಜದ ಅನೇಕ‌ ಮುಖಂಡರು ಉಪಸ್ಥಿತರಿದ್ದರು. ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಲ್ಲಯ್ಯ ಬಿ.ಗುತ್ತೇದಾರ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು. ಬಸಯ್ಯ ಬಿ.ಗುತ್ತೇದಾರ ತೆಲ್ಲೂರ ಮತ್ತು ತಂಡ ಗೀತ ಗಾಯನ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!