ರಾಜ್ಯದಲ್ಲಿ ಒಂದು ಲಕ್ಷ 40 ಸಾವಿರ ಜನರನ್ನು ಮದ್ಯಮುಕ್ತ ಮಾಡಿದ ಧರ್ಮಸ್ಥಳದ ಸಾಧನೆ ಪ್ರಶಂಸನೀಯ
ಕಲಬುರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಮದ್ಯ ವರ್ಜನ ಶಿಬಿರ ಹಮ್ಮಿಕೊಂಡು ರಾಜ್ಯದಲ್ಲಿ 1 ಲಕ್ಷ 40ಸಾವಿರ ಜನರನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಿರುವುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದೊಡ್ಡ ಸಾಧನೆಯಾಗಿದ್ದು ಅಭಿನಂದನೆಯ ಕಾರ್ಯಕ್ರಮ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಅಭಿಪ್ರಾಯಪಟ್ಟರು.
ಕಲಬುರಗಿಯ ರಾಮತೀರ್ಥದ ಮಂದಾರ ಪುಷ್ಪ ಕಲ್ಯಾಣ ಮಂಟಪದಲ್ಲಿ ಅ. 15ರಂದು ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಕಲಬುರಗಿ ಜಿಲ್ಲೆಯ ವತಿಯಿಂದ ನಡೆದ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿ ಗ್ರಾಮಗಳ ಅಭಿವೃದ್ಧಿ ,ಮಹಿಳೆಯರ ಸಬಲೀಕರಣ ,ಪುರುಷರ ಬದುಕು ಹಸನ ಮಾಡುವಂತಹ ಕಾರ್ಯಗಳನ್ನು ನಡೆಸುತ್ತಿದ್ದು 6.50 ಲಕ್ಷ ಸ್ವಸಹಾಯ ಸಂಘಗಳ ಮೂಲಕ ಸುಮಾರು 55 ಲಕ್ಷ ಸದಸ್ಯರು ಸಮಾಜ ಪರಿವರ್ತನೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮದ್ಯವರ್ಜನ ಶಿಬಿರ, ಕೆರೆಗಳ ಪುನರ್ ನಿರ್ಮಾಣ, ಶಿಕ್ಷಣಕ್ಕೆ ನೆರವು, ಆರ್ಥಿಕ ಸಬಲೀಕರಣ ಕ್ರಮಗಳು ಸಮಾಜದಲ್ಲಿ ಪ್ರಗತಿಗೆ ಕಾರಣವಾಗಿದೆ. ಬೀದರ್ ಜಿಲ್ಲೆಯಲ್ಲಿ ನಡೆಸಿದ ಕ್ಷೀರಕ್ರಾಂತಿಯಿಂದ ಗಮನಾರ್ಹ ಸಾಧನೆ ಮಾಡಲಾಗಿದೆ.ಧರ್ಮಸ್ಥಳ ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಲಭಿಸಿರುವುದು ಹೆಮ್ಮೆಯ ಸಂಗತಿ. ಮದ್ಯದ ವ್ಯಸನದಿಂದ ಮುಕ್ತಿಗೊಳಿಸಿ ನವ ಜೀವನ ಕಲ್ಪಿಸುವ ಪ್ರಯತ್ನ ಶ್ಲಾಘನೀಯವಾದುದು. ಈ ಎಲ್ಲ ಕಾರ್ಯಕ್ರಮಗಳು ಪ್ರಗತಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಸಿ ಎನ್ ಬಾಬಳಗಾಂವ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಸಾಧನೆ ನಮಗೆಲ್ಲಾ ಆದರ್ಶವಾಗಲಿ ಎಂದು ಹೇಳಿ ಠರಾವುಗಳನ್ನು ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಡಾ. ಸದಾನಂದ ಪೆರ್ಲ, ಉಪಾಧ್ಯಕ್ಷರಾದ ಅನಿಲ್ ಕುಮಾರ್ ಡಾಂಗೆ, ಸದಸ್ಯರಾದ ಮಾಲತಿ ರೇಷ್ಮೆ, ಎಸ್ ಎಸ್ ಹಿರೇಮಠ, ಗಂಗಪ್ಪ ಹರಸೂರಕರ್, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ಪ್ರಾಸ್ತಾವಿಕ ಭಾಷಣ ಮಾಡಿದರು. ನವಜೀವನ ಸಮಿತಿಯ ಸದಸ್ಯ ಆದಪ್ಪ ಭೀಮನಹಳ್ಳಿ ತಮ್ಮ ಅನಿಸಿಕೆ ಹಂಚಿಕೊಂಡರು. ಯೋಜನೆಯ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಿಂಜೆ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ರವಿಕುಮಾರ್ ನೀಲೂರು, ಸೂರ್ಯಕಾಂತಿ ಅವರಾದ, ಶಾಂತಪ್ಪ ಕೋರೆ, ಪ್ರಭಾವತಿ ಮೇತ್ರೆ ಮಲ್ಲಿನಾಥ ಮೈಂದರ್ಗಿ, ರಾಜಕುಮಾರ್ ರಿಯಾಜ್ ಅಕ್ತಾರ್ , ಕಲ್ಲನಗೌಡ,ರಾಜೇಶ್, ಕೃಷ್ಣಪ್ಪ, ಮಹಾಂತೇಶ ಚಿದಂಬರ ಕೊಲ್ಲಾಪುರ, ಮಮತಾ ಮತ್ತಿತರು ಉಪಸ್ಥಿತರಿದ್ದರು. ಪ್ರಶಾಂತ್ ನಿರೂಪಿಸಿದರು. ಮಂದಾರ ಪುಷ್ಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಅಳಂದ ಚೆಕ್ ಪೋಸ್ಟ್ ದೇವಿ ಮಹಾದ್ವಾರದಿಂದ ನವ ಜೀವನ ಸಮಿತಿ ಸದಸ್ಯರ ಹಾಗೂ ನಾಗರಿಕರ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್,ಸ್ವಾಮಿ ವಿವೇಕಾನಂದ ಮುಂತಾದ ಮಹಾತ್ಮರ ವೇಷಭೂಷಣ ಧರಿಸಿದ ಮಕ್ಕಳು ಎಲ್ಲರ ಗಮನ ಸೆಳೆದರು. ಅಳಂದ ಕಮಲಾಪುರ ,ಅಫಜಲ್ಪುರ ಹಾಗೂ ಕಲಬುರಗಿ ಯೋಜನಾ ಕಚೇರಿಗಳ ವ್ಯಾಪ್ತಿಯ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


