ದಸರಾ ಹಬ್ಬದ ಪ್ರಯುಕ್ತ ಕೆ.ಕೆ.ಆರ್.ಟಿ.ಸಿ ಸಂಸ್ಥೆಯಿಂದ 500 ಹೆಚ್ಚುವರಿ ಬಸ್ ಕಾರ್ಯಾಚರಣೆ : ಡಾ.ಬಿ.ಸುಶೀಲ

ಕಲಬುರಗಿ,ದಸರಾ ಹಬ್ಬ, ವಾರಾಂತ್ಯ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರದೇಶದ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಸೋಲಾಪೂರದ ತುಳಜಾಪುರಕ್ಕೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೆಪ್ಟೆಂಬರ್ 25, 26 ಹಾಗೂ 29 ರಂದು ಸಂಸ್ಥೆ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು, ತುಳಜಾಪೂರ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಸೆಪ್ಟೆಂಬರ್ 26, 27 ಹಾಗೂ 30 ರಂದು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ವಾಹನಗಳ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇನ್ನು ಹಬ್ಬ ಮತ್ತು ರಜೆ ಮುಗಿದ ನಂತರ ಅಕ್ಟೋಬರ್ 3 ರಿಂದ 5ರ ವರೆಗೆ ಸಹ ಸಂಚಾರ ದಟ್ಟಣೆಗನುಗುಣವಾಗಿ ವಾಹನಗಳ ಕಾರ್ಯಾಚರಣೆ ನಡೆಯಲಿದೆ ಎಂದಿದ್ದಾರೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದ್ದು, ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್‌ಗಳ ಮುಖಾಂತರ ಆಸನ ಕಾಯ್ದಿರಿಸಬಹುದಾಗಿದೆ. 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯತಿ ನೀಡಲಾಗುತ್ತಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್ ಅಪ್ ಪಾಯಿಂಟ್ ಸ್ಥಳ ಮತ್ತು ಹೆಸರು ಗಮನಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!