ಯಾದಗಿರಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾಲೂಕಿನ ಲಿಂಗೇರಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾ ವಕ್ತಾರ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಪುಸ್ತಕ ಹಾಗೂ ಪೆನ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸೇವಾ ಸಂಘದ ಜಿಲ್ಲಾ ವಕ್ತಾರ ಮೋಹನ್ ಚೌವಣ್ ಮಾತನಾಡಿ, ಶಿಕ್ಷಣವೇ ಜೀವನದ ಬೆಳಕಾಗಿದ್ದು, ಪ್ರತಿಯೊಬ್ಬ ಮಕ್ಕಳೂ ಓದುತ್ತಾ ಸಮಾಜದ ಪ್ರಗತಿಗೆ ಕೈಜೋಡಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗ ವ್ಯರ್ಥವಾಗದಂತೆ, ನಾವು ಶಿಕ್ಷಣದ ಮೂಲಕ ಸಮಾಜವನ್ನು ಬಲಪಡಿಸಬೇಕು. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವಿಲ್ಲದೆ ಬದುಕು ಸಾಗಿಸುವುದು ಕಷ್ಟ, ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾಭ್ಯಾಸವನ್ನು ಗಂಭೀರವಾಗಿ ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ SDMC ಅಧ್ಯಕ್ಷ ದೇವಿಂದ್ರ ಚವಾಣ್, ಶಾಲೆಯ ಶಿಕ್ಷಕರು, ಗ್ರಾಮದ ಹಿರಿಯರು, ಯುವಕರು ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು. ಮಕ್ಕಳೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ದೇಶಭಕ್ತಿಗೀತೆಗಳನ್ನು ಹಾಡಿ, ಕವಿತೆಗಳನ್ನು ವಾಚಿಸಿ, ಕಾರ್ಯಕ್ರಮಕ್ಕೆ ಹಿರಿಮೆಯನ್ನು ತಂದರು.