ಯಾದಗಿರಿ:ರಕ್ತದಾನದ ಬಗ್ಗೆ ಭಯಬೇಡ ಪ್ರತಿಯೊಬ್ಬ ಯುವಕರು ರಕ್ತದಾನಕ್ಕೆ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ನಾಯ್ಕೊಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಎಸ್.ನಾಯ್ಕೋಡಿ ಹೇಳಿದರು.
79 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 228ನೇ ಜಯಂತೋತ್ಸವ ನಿಮಿತ್ಯ ನವಚೇತನ ಟ್ರಸ್ಟ್ ವಡಗೇರಾ ಹಾಗೂ ನಂದಿನಿ ಟ್ರಸ್ಟ್ ತೇಕರಾಳ ಸಂಯೋಗದಲ್ಲಿ ಶುಕ್ರವಾರದಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನಿಯರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ರಕ್ತದಾನ ಪುಣ್ಯದ ಕೆಲಸ ರಕ್ತವು ಸಂಜೀವಿನಿ ಇದ್ದಂತೆ ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ಕೊರತೆ ಕಾಡುತ್ತಿದೆ ಆದ್ದರಿಂದ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ರಕ್ತದಾನದಿಂದ ಮನುಷ್ಯನ ಆರೋಗ್ಯವು ಉತ್ತಮವಾಗಿರುವುದರ ಜೊತೆಗೆ ಹಲವು ರೋಗರುಜಿನೆಗಳನ್ನು ತಡೆಯಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣಮಂತ್ರಾಯ ಗೌಡ ಮಾಲಿ ಪಾಟೀಲ್ ತೇಕರಾಳ ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ,ಮರಿಲಿಂಗಪ್ಪ ಸಾಹುಕಾರ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದುರೆಡ್ಡಿ ತಂಗಡಗಿ, ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ ಆರ್ ಪಾಟೀಲ್, ಕಾಂಗ್ರೆಸ್ ಮುಖಂಡ ಸಂಜಯ ಕುಮಾರ್ ಕಾವಲಿ, ಸಾಬಣ್ಣ ಹೊರುಣಚಿ, ಬಸವರಾಜ್ ಕಾವಲಿ, ಹೊನ್ನಪ್ಪ ಹಾಲಗೇರಾ, ಹಾಗೂ, ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ರಕ್ತದಾನಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ನವಚೇತನ ಟ್ರಸ್ಟ್ ಅಧ್ಯಕ್ಷ ನಿಂಗಣ್ಣ ಜಡಿ ವಡಗೇರಾ ನಿರೂಪಿಸಿ ವಂದಿಸಿದರು