ಮೋದಿ 75ನೇ ಜನ್ಮದಿನ: ಚಿತ್ತಾಪುರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಚಿತ್ತಾಪುರ ಮಂಡಳಿಯು ವಿಶಿಷ್ಟವಾದ ‘ಸೇವಾ ಪಾಕ್ಷಿಕ’ ಕಾರ್ಯಕ್ರಮವನ್ನು ಆರಂಭಿಸಿದೆ.

ಈ ಕಾರ್ಯಕ್ರಮವು ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧೀಜಿ ಅವರ ಜನ್ಮದಿನವಾದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಕಾರ್ಯಕ್ರಮದ ಭಾಗವಾಗಿ, ಪಟ್ಟಣದ ಬಸ್ ನಿಲ್ದಾಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಭಾರತ ಅಭಿಯಾನವು ಕೇವಲ ಪರಿಸರವನ್ನು ಶುದ್ಧೀಕರಿಸುವುದಲ್ಲದೆ, ನಮ್ಮ ಮನಸ್ಸನ್ನು ಸಹ ಶುದ್ಧೀಕರಿಸುತ್ತದೆ ಎಂದರು. ನಮ್ಮ ಮನೆ, ಊರು ಮತ್ತು ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ಇಡೀ ದೇಶವೇ ಸ್ವಚ್ಛವಾಗುತ್ತದೆ ಎಂದು ಅವರು ಹೇಳಿದರು.

ಮಾಜಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಈ ಸೇವಾ ಪಾಕ್ಷಿಕದ ಅವಧಿಯಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಮ್ಯಾರಥಾನ್, ಗಿಡ ನೆಡುವಂತಹ ಹಲವು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವೇ ಕಂಡ ಅಪರೂಪದ ನಾಯಕ. ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಜನ್ಮದಿನವನ್ನು ವಿವಿಧ ಸೇವೆಗಳೊಂದಿಗೆ ಆಚರಿಸುವುದು ನಿಜಕ್ಕೂ ಗೌರವದ ವಿಷಯ ಎಂದರು.

ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೇವಾ ಪಾಕ್ಷಿಕ ಆಚರಿಸಲಾಗುತ್ತಿದ್ದು, ಅದರಂತೆ ಚಿತ್ತಾಪುರದಲ್ಲಿಯೂ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರಗಳು, ರಕ್ತದಾನ, ಅನ್ನದಾಸೋಹ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಈ ಕಾರ್ಯಕ್ರಮದ ಸಮಾರೋಪಗೊಳ್ಳಲಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಡದ ಸಂತೋಷ ಹಾದಿಮನಿ, ಜಿಲ್ಲಾ ಒಬಿಸಿ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ, ನಾಗರಾಜ ಬಂಕಲಗಿ, ಶಿವರಾಮ ಚವ್ಹಾಣ, , ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!