ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಸುಮಾರು 2,500 ಆಹಾರ ಸಾಮಗ್ರಿಗಳ‌  ವಿತರಣೆ- ಸಂಸದ ರಾಧಾಕೃಷ್ಣ ದೊಡ್ಡಮನಿ.

ಕಲಬುರಗಿ ಜಿಲ್ಲೆಯ ಅತೀವೃಷ್ಠಿ ಹಾಗೂ ಪ್ರವಾಹ ಪರಿಸ್ಥಿತಿ‌ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ನಾಳೆ ( ಶುಕ್ರವಾರ) ಜಿಲ್ಲಾಡಳಿತ ಮೂಲಕ ನೀಡಲಾಗುವುದು ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ‌‌ ನೀಡಿರುವ ಅವರು,
ಅತೀವೃಷ್ಠಿ ಹಾಗೂ ಪ್ರವಾಹ ಎದುರಿಸುತ್ತಿರುವ ಗ್ರಾಮಗಳ‌ ಜನರಿಗೆ ವೈಯಕ್ತಿಕವಾಗಿ ಸುಮಾರು 2,500 ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು ಅತೀವೃಷ್ಠಿ ಉಂಟಾಗಿದೆ ಜೊತೆಗೆ ಭೀಮಾ ಹಾಗೂ ಬೆಣ್ಣೆ ತೊರೆ ನದಿಗಳು ತುಂಬಿ ಹರಿಯುತ್ತಿದ್ದು ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮವಾಗಿ ನೂರಾರು‌ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ.

ಸರ್ಕಾರಿ ಶಾಲೆಗಳು, ಸಮುದಾಯ ಭವನಗಳು ಹಾಗೂ ದೇವಾಲಯಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಿ ಸ್ಥಳಾಂತರಗೊಂಡ ಗ್ರಾಮಸ್ಥರಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರಗಳಲ್ಲಿ ಇರುವ ಮಹಿಳೆಯರು ಮಕ್ಕಳು ಹಾಗೂ ವೃದ್ದರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ.

ಕಾಳಜಿ ಕೇಂದ್ರಗಳ ಉಸ್ತುವಾರಿಗೆ ಹಾಗೂ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸುರಕ್ಷತೆ ಕೈಗೊಳ್ಳಲು ಅಧಿಕಾರಿಗಳ ತಂಡಗಳನ್ನು ನೇಮಿಸಲಾಗಿದೆ.

ಸಂಸದರಾಗಿ ತಾವು ಹಾಗೂ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಮಳೆಯಿಂದ ಹಾನಿಗೊಳಗಾದ ಜನರಿಗೆ ಅಗತ್ಯ ನೆರವು ನೀಡಲಿರುವುದಾಗಿ ಹೇಳಿದ ರಾಧಾಕೃಷ್ಣ ಅವರು, ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮತ್ತು ಮನೆಗಳ ಸರ್ವೆ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸಲಹೆ- ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಮಳೆಯಿಂದ ಹಾನಿಗೊಳಗಾದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯವ್ಯಾಪ್ತಿಯ ರಸ್ತೆಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಮರುಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯದಿಂದ ಅಗತ್ಯ ಅನುದಾನ ತರುವಲ್ಲಿ ತುರ್ತು ಕ್ರಮವಹಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!